ರಾಯಚೂರು(ಮೇ 08): ರಾಯಚೂರು ಜಿಲ್ಲೆಯ ಪ್ರಗತಿಪರರು, ವಿದ್ಯಾರ್ಥಿಗಳ ಹೋರಾಟದ ಫಲವಾಗಿ ರಾಯಚೂರು ವಿಶ್ವವಿದ್ಯಾಲಯ ಆರಂಭಕ್ಕೆ ಸಿದ್ದತೆ ನಡೆದಿದೆ. ಕೊನೆಗೂ ರಾಜ್ಯಪಾಲರು ವಿವಿ ಆರಂಭಕ್ಕೆ ತಿದ್ದುಪಡಿ ಕಾಯ್ದೆಗೆ ಅಂಕಿತ ಹಾಕಿದ್ದು ರಾಜ್ಯ ಸರಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಇದರಿಂದ ರಾಯಚೂರು ಜನತೆ ಹರ್ಷಗೊಂಡಿದ್ದಾರೆ.
ಗುಲಬುರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ರಾಯಚೂರು ಹಾಗು ಯಾದಗಿರಿ ಜಿಲ್ಲೆಯ 187 ಕಾಲೇಜುಗಳು ಈಗ ಸ್ಥಾಪನೆಯಾಗಲಿರುವ ರಾಯಚೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರಲಿವೆ. ಕಲಬುರಗಿ, ಬೀದರ್, ರಾಯಚೂರು ಹಾಗು ಯಾದಗಿರಿ ಜಿಲ್ಲೆ ವ್ಯಾಪ್ತಿ ಹೊಂದಿರುವ ಗುಲಬುರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿ ವಿಸ್ತಾರವಾಗಿ ಒತ್ತಡದಿಂದಾಗಿ ಗುಣಮಟ್ಟದ ಶಿಕ್ಷಣ ಹಾಗು ಪರೀಕ್ಷೆ ನಡೆಸಲು ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಯಚೂರು ವಿಶ್ವವಿದ್ಯಾಲಯ ಆಗಬೇಕೆಂದು ಕೂಗು ಎದ್ದಿತು. ಈ ಕೂಗಿಗೆ 2016 ರಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಸಹಮತ ವ್ಯಕ್ತಪಡಿಸಿ ರಾಯಚೂರು ಸಾಹಿತ್ಯ ಸಮ್ಮೇಳನದಲ್ಲಿ ವಿವಿ ಸ್ಥಾಪನೆಗೆ ಭರವಸೆ ನೀಡಿದ್ದರು. 2017 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ನಲ್ಲಿ ವಿವಿ ಸ್ಥಾಪನೆಗೆ ಘೋಷಣೆ ಮಾಡಿದ್ದರು.
ಉನ್ನತ ಶಿಕ್ಷಣ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿರಲಿಲ್ಲ, ಆದರೂ ರಾಜ್ಯ ಸರಕಾರ 2018 ಚುನಾವಣೆ ಘೋಷಣೆ ಮುನ್ನ ಮುಜಾಫರ್ ಅಸಾದಿ ಎಂಬುವವರನ್ನು ವಿಶೇಷಾಧಿಕಾರಿಯಾಗಿ ನೇಮಕ ಮಾಡಿದ್ದರು. ವಿವಿ ಆರಂಭಕ್ಕೆ ರಾಜ್ಯಪಾಲರು ಅಂಕಿತ ಹಾಕದೆ ಇರುವದರಿಂದ ನೆನೆಗುದಿಗೆ ಬಿದ್ದಿತ್ತು. ಈ ಮಧ್ಯೆ ಈ ವರ್ಷದ ಫೆಬ್ರುವರಿಯಲ್ಲಿ ರಾಜ್ಯ ಸಚಿವ ಸಂಪುಟವು ರಾಯಚೂರು ವಿವಿ ಸ್ಥಾಪನೆಗೆ ಸುಗ್ರೀವಾಜ್ಞೆ ಹೊರಡಿಸಿತ್ತು. ಕೊನೆಯದಾಗಿ ಎಪ್ರಿಲ್ 30 ರಂದು ರಾಯಚೂರು ವಿವಿ ಆರಂಭಕ್ಕೆ ತಿದ್ದುಪಡಿ ಕಾಯ್ದೆಗೆ ಅಂಕಿತ ಹಾಕಿ ಮೇ 2 ರಂದು ಗೆಜೆಟ್ ನೋಟಿಫಿಕೇಷನ್ ಪ್ರಕಟವಾಗಿದೆ.
ಈಗ ಗುಲಬುರ್ಗಾ ವಿಶ್ವವಿದ್ಯಾಲಯದಿಂದ ಆಸ್ತಿ ವರ್ಗಾವಣೆಯಾಗಬೇಕಾಗಿದೆ. ಹಿಂದಿನ ಗುಲಬುರ್ಗಾ ವಿವಿ ಉಪಕುಲಪತಿಗಳಾಗಿದ್ದ ವಿಬಿ ಕುಟಿನ್ಯೂ ವರದಿ ಸಲ್ಲಿಸಿದಂತೆ ಯಾದಗಿರಿ ಜಿಲ್ಲೆಯ ಖಾನಾಪುರದಲ್ಲಿ ಪಿಜಿ ಸೆಂಟರ್ ಆರಂಭಿಸಬೇಕಾಗಿದೆ. ರಾಯಚೂರು ವಿವಿ ಆರಂಭಕ್ಕೆ ಈಗಾಗಲೇ ಪಿಜಿ ಸೆಂಟರ್ ಇರುವಲ್ಲಿ 250 ಎಕರೆ ಭೂಮಿ ಇದೆ. ಆರಂಭದಲ್ಲಿ ವಿವಿ ಆರಂಭಕ್ಕೆ 2 ಕೋಟಿ ಅನುದಾನ ಮೀಸಲಿಡಲಾಗಿದೆ. ಆದರೆ ರಾಯಚೂರು ವಿವಿಗೆ ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯ ಅಡಿಯಲ್ಲಿ ಐದು ವರ್ಷಕ್ಕೆ ಪ್ರತಿ ವರ್ಷ 100 ಕೋಟಿ ರೂಪಾಯಿಯಂತೆ ಹಣ ನೀಡಿ ಅಭಿವೃದ್ಧಿ ಪಡಿಸಬೇಕಾಗಿದೆ.
ವಿವಿ ಶೈಕ್ಷಣಿಕ ವರ್ಷ ಜುಲೈ ತಿಂಗಳಲ್ಲಿ ಆರಂಭವಾಗುತ್ತಿತ್ತು, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ನಲ್ಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ವರ್ಷ ಆರಂಭವಾಗಲಿದೆ, ಈಗ ಸಮಯವಿದೆ. ವಿವಿ ವಿಶೇಷಾಧಿಕಾರಿ ಕೋಟೇಶ್ವರ್ ಹಾಗು ರಾಜ್ಯ ಸರಕಾರ ಮುತುವರ್ಜಿ ವಹಿಸಿದರೆ ಇದೇ ಶೈಕ್ಷಣಿಕ ವರ್ಷದಿಂದ ಆರಂಭವಾಗಿ ರಾಯಚೂರು ಜನತೆಯ ಕನಸು ನನಸು ಮಾಡಬೇಕಾಗಿದೆ