ಅಥಣಿ: ತಾಲೂಕಿನಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿವೆ. ಗುರುವಾರ ತಡರಾತ್ರಿ ನಂದಗಾವ್ ಗ್ರಾಮದಲ್ಲಿ ಕಳ್ಳರು ಕೈಚಳಕ ತೋರಿದ್ದು, ಎರಡು ದೇವಾಲಯ, ಆರು ಮನೆಗಳನ್ನು ದೋಚಿ ಪರಾರಿಯಾಗಿದ್ದಾರೆ.
ಎರಡು ದೇವಾಲಯ ಹಾಗೂ ಆರೂ ಮನೆಗಳಿಗೆ ಕನ್ನ ಹಾಕಿರುವ ಖದೀಮರು ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಜೈನ ಬಸದಿ, ಯಲ್ಲಮ್ಮ ದೇವಸ್ಥಾನದ ಬೀಗ ಮುರಿದು ಅಟ್ಟಹಾಸ ಮೆರೆದಿದ್ದಾರೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಅಥಣಿ ತಾಲೂಕಿನಲ್ಲಿ ಹೆಚ್ಚಿದ ಕಳ್ಳತನ ಪ್ರಕರಣಗಳು
ಅಲ್ಲದೆ ಗ್ರಾಮದ ಮಾಲಾ ರಾಜಮಾನೆ ಎಂಬುವವರ ಮನೆಯಲ್ಲಿ 20,000 ರೂ. ಮತ್ತು ಅರ್ಧ ತೊಲೆ ಬಂಗಾರದ ಉಂಗುರ, ನ್ಯಾಮಕ್ಕಾ ಬಿದರಿ ಎಂಬುವರ ಮನೆಯಿಂದ ಎರಡು ತೊಲೆ ಬಂಗಾರ ಹಾಗೂ 60,000 ರೂ. ಮತ್ತು ಸುಮಾರು ಮೂರು ಸಾವಿರ ರೂ. ಬೆಲೆ ಬಾಳುವ ಸೀರೆಗಳು, ರಾಮಗೌಡ ಪಾಟೀಲ್ ಎಂಬುವರ ಒಂದು ಲ್ಯಾಪ್‌ಟಾಪ್ ತೆಗೆದುಕೊಂಡ ಹೋಗಿದ್ದು, ಇತರೆ ಮನೆಗಳನ್ನೂ ಜಾಲಾಡಿದ್ದಾರೆ. ಸದ್ಯ ತಾಲೂಕಿನ 10ಕ್ಕೂ ಹೆಚ್ಚು ಗ್ರಾಮದಲ್ಲಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದರು, ಪೊಲೀಸ್ ಇಲಾಖೆ ಇದುವರೆಗೂ ಒಂದೇ ಒಂದು ಪ್ರಕರಣ ಭೇದಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.