ನೆಲಮಂಗಲ: ಕೊರೊನಾ ಸೋಂಕು ಹರಡದಂತೆ ತಡೆಯಲು ಮಾಸ್ಕ್ ಧರಿಸದವರಿಂದ ದಂಡ ವಸೂಲಿ ಮಾಡಲು ಸರ್ಕಾರ ನಿರ್ಧರಿಸಿದ್ದು ನಗರ ಪ್ರದೇಶಗಳಲ್ಲಿ 250 ರುಪಾಯಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 100 ರುಪಾಯಿ ದಂಡ ವಸೂಲಿ ಮಾಡಲು ಪೊಲೀಸರಿಗೂ ಸಹ ಸೂಚನೆ ನೀಡಲಾಗಿದೆ. ಆದ್ರೆ ಸೂಚನೆ ನೀಡಿದ ಬೆನ್ನಲ್ಲಿ ಪೊಲೀಸರಿಗೆ ಪ್ರತಿದಿನಕ್ಕೆ 50 ಕೇಸ್ ಮಾಡುವಂತೆ ಟಾರ್ಗೆಟ್ ಸಹ ನೀಡಲಾಗಿದೆ.
ಸರ್ಕಾರದ ದಂಡಕ್ಕೆ ಜನ ಭಯಭೀತರಾಗಿದ್ದು, ಮಾಸ್ಕ್ ಹಾಕಿಕೊಂಡು ಓಡಾಡುವವರ ಸಂಖ್ಯೆ ಹೆಚ್ಚಾಗಿದೆ.
ದಂಡ ಹಾಕಲೇ ಬೇಕು ಎಂದು ಟಾರ್ಗೆಟ್ ನೀಡಿರುವ ಹಿನ್ನೆಲೆ ಪೊಲೀಸರು ಬೇಕರಿ, ಹೋಟೆಲ್, ಟಿ ಶಾಪ್‌ಗಳ ಬಳಿ ನಿಂತಿದ್ದವರನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಟೀ, ಊಟಕ್ಕೆ ಮಾಸ್ಕ್ ತಗೆದಿರುವುದಾಗಿ ಮನವಿ ಮಾಡಿದ್ರು ಬಿಡದೆ ಬೆಂಗಳೂರಿನ ಬಾಗಲಗುಂಟೆ ಪೊಲೀಸರು ದಂಡ ವಸೂಲಿಗೆ ಇಳಿದಿದ್ದಾರೆ. ದಾಸರಹಳ್ಳಿಯ ಹಾವನೂರು ಬಡಾವಣೆಯ ಬೇಕರಿ ಬಳಿ ವೆಂಕಟೇಶ್ ಚಂದ್ರಶೇಖರ್ ಸಿಹಿ ತಿಂಡಿ ತಿಂದು ಟೀ ಕುಡಿಯಲು ಮುಂದಾಗಿದ್ದ ವೇಳೆ ಬಾಗಲಗುಂಟೆ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ. ಪೊಲೀಸರ ನಡೆಗೆ ಸಾರ್ವಜನಿಕರು ಕಿಡಿ ಕಾರಿದ್ದಾರೆ.