ಮೈಸೂರು: ರಾಜ್ಯದೆಲ್ಲೆಡೆ ಇಂದು ಆಯುಧ ಪೂಜೆಯ ಸಂಭ್ರಮ. ಅದರಲ್ಲೂ ಅರಮನೆ ನಗರಿಯಲ್ಲಿ ಅಬ್ಬರ ಜೋರಾಗಿದೆ. ಇಂದು ಆಯುಧ ಪೂಜೆ ನಡೆದ್ರೆ, ನಾಳೆ ಜಂಬೂ ಸವಾರಿ ನಡೆಯಲಿದೆ. ಬೆಳಗ್ಗೆಯಿಂದಲೇ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಶುರುವಾಗಿವೆ. ಮೈಸೂರು ಅರಮನೆಯಲ್ಲಿ ಸರಳ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದೆ.
ಬೆಳಗ್ಗೆ 6.15ಕ್ಕೆ ಅರಮನೆಯಲ್ಲಿ ಚಂಡಿ ಹೋಮದಿಂದ ಇಂದಿನ ಕಾರ್ಯಗಳು ಆರಂಭವಾಗಿದೆ. ಬೆಳಗ್ಗೆ 6.28ಕ್ಕೆ ಅರಮನೆ ಆವರಣದ ಕೋಡಿ ಸೋಮೇಶ್ವರ ದೇಗುಲಕ್ಕೆ ಆಯುಧಗಳನ್ನು ರವಾನಿಸಲಾಗುತ್ತೆ. ಸುಮಾರು ಒಂದು ಗಂಟೆ ಕಾಲ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುತ್ತೆ. ಬೆಳಗ್ಗೆ 7.20ಕ್ಕೆ ಮತ್ತೆ ಆಯುಧಗಳು ಅರಮನೆಗೆ ರವಾನೆ.
ನಂತರ ಸಿಂಹಾಸನದ ಸಿಂಹ ವಿಸರ್ಜನೆ, ಬಳಿಕ ಅರಮನೆಯ ದೇವರ ಮನೆಯಲ್ಲಿ ಯದುವೀರ್ ಕಂಕಣ ವಿಸರ್ಜನೆ ಮಾಡುತ್ತಾರೆ. ಪೂಜೆಯೊಂದಿಗೆ ಆಯುಧ ಪೂಜಾ ಕಾರ್ಯಕ್ರಮ ಸಮಾಪ್ತಿಯಾಗುತ್ತದೆ.
ಬಳಿಕ ಬೆಳಗ್ಗೆ 9.15ಕ್ಕೆ ಚಂಡಿ ಹೋಮದ ಪೂರ್ಣ ಆಹುತಿ. ಬೆಳಗ್ಗೆ 10.15ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಸವಾರಿ ತೊಟ್ಟಿಗೆ ಬರುತ್ತವೆ. ಬೆಳಗ್ಗೆ 10.50ಕ್ಕೆ ಕಾರು, ಪಲ್ಲಕ್ಕಿ ಸೇರಿ ಎಲ್ಲದಕ್ಕೂ ಯದುವೀರ ಕೃಷ್ಣದತ್ತ ಒಡೆಯರ್ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ಸಂಜೆ ಎಂದಿನಂತೆ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯುತ್ತೆ.