ಬೆಂಗಳೂರು, ಜೂ.2- ನಗರದಲ್ಲಿ ಮಾರುಕಟ್ಟೆಗಳನ್ನು ತೆರೆಯಲು ಬಿಬಿಎಂಪಿಯು ಜೂ.8ರಿಂದ ಅನುಮತಿ ನೀಡಿದೆ. ಆದರೆ ಯಾವುದೇ ಕಾರಣಕ್ಕೂ ಬೀದಿ ಬದಿ ವ್ಯಾಪಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಮೇಯರ್ ಗೌತಮ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರುಕಟ್ಟೆ ಪ್ರಾರಂಭಿಸುವ ಕುರಿತು ಇಂದು ಮಾರುಕಟ್ಟೆ ಅಸೋಸಿಯೇಷನ್ ಪದಾಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಮಾತನಾಡಿದ ಮೇಯರ್, ಈ ವಿಷಯ ಸ್ಪಷ್ಟಪಡಿಸಿದರು.
ಕೆ.ಆರ್.ಮಾರುಕಟ್ಟೆಯಲ್ಲಿರುವ 2,000ಕ್ಕೂ ಹೆಚ್ಚು ಮಳಿಗೆಗಳು, ಫ್ರೇಜರ್ ಟೌನ್‍ನಲ್ಲಿರುವ 400 ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿದ್ದೇವೆ. ಆದರೆ ಮಳಿಗೆ ತೆರೆಯುವ ಮುನ್ನ ಅವರು ಬಾಕಿ ಉಳಿಸಿರುವ ಬಾಡಿಗೆ ಹಣವನ್ನು ಪಾವತಿಸಲೇಬೇಕು. ಮತ್ತು ಹೊಸ ಒಪ್ಪಂದಕ್ಕೆ ಸಹಿ ಮಾಡುವಂತೆ ಷರತ್ತು ವಿಧಿಸಲಾಗಿದೆ ಎಂದು ಹೇಳಿದರು.
ಮಳಿಗೆ ತೆರೆದ ಕೂಡಲೇ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸ್ಥಳದಲ್ಲಿ ಸ್ಯಾನಿಟೈಸರ್ ಇಟ್ಟುಕೊಂಡಿರಬೇಕು. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹವರ ಮಳಿಗೆ ಬಂದ್ ಮಾಡಿಸಲಾಗುವುದು ಎಂದು ಮೇಯರ್ ಎಚ್ಚರಿಕೆ ನೀಡಿದರು.
ಬೀದಿ ಬದಿ ವ್ಯಾಪಾರಕ್ಕೆ ಅನುಮತಿ ನೀಡಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಗೌತಮ್‍ಕುಮಾರ್ ಸ್ಪಷ್ಟಪಡಿಸಿದರು.ಸಭೆಯಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್, ಉಪ ಮೇಯರ್ ರಾಮಮೋಹನ್‍ರಾಜ್, ಸ್ಥಳೀಯ ಸದಸ್ಯ ಶಕೀಲ್ ಅಹಮದ್, ಆಯುಕ್ತ ಬಿ.ಎಚ್.ಅನಿಲ್‍ಕುಮಾರ್, ಪೂರ್ವ ವಲಯ ಜಂಟಿ ಆಯುಕ್ತರಾದ ಪಲ್ಲವಿ, ಮಾರುಕಟ್ಟೆ ಉಪ ಆಯುಕ್ತ ಹೇಮಂತ್, ಕೆ.ಆರ್.ಮಾರುಕಟ್ಟೆ , ಕಲಾಸಿಪಾಳ್ಯ, ರಸೆಲ್ ಮಾರುಕಟ್ಟೆ ಅಸೋಸಿಯೇಷನ್ ಪದಾಧಿಕಾರಿಗಳು, ಪೆÇಲೀಸ್ ಅಧಿಕಾರಿಗಳು ಹಾಜರಿದ್ದರು.