ಬೆಂಗಳೂರು, ಮೇ 9- ಪಿಪಿಇ ಕಿಟ್ ಇಲ್ಲ. ನಮಗೆ ಇಲ್ಲಿ ಯಾವ ಸೇಫ್ಟಿ ಇಲ್ಲ… ಕನಿಷ್ಠ ಸುರಕ್ಷಾ ಕ್ರಮಗಳಿಲ್ಲ. ಸೋಂಕಿತರನ್ನೆಲ್ಲಾ ಇಲ್ಲಿಗೆ ಸ್ಥಳಾಂತರ ಮಾಡಿದರೆ ನಾವು ಕೆಲಸ ಮಾಡುವುದು ಹೇಗೆ. ನಮಗೂ ಸೋಂಕು ತಗುಲುವ ಆತಂಕವಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನಗರದ ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು.
ವೈದ್ಯರು, ನರ್ಸ್‍ಗಳು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಬಹಳಷ್ಟು ಜನ ಆಸ್ಪತ್ರೆಯ ಮುಂದೆ ಜಮಾಯಿಸಿ ನಾವು ಕೆಲಸ ಮಾಡುವುದಿಲ್ಲ. ನಮಗೆ ಸರಿಯಾದ ಪಿಪಿಇ ಕಿಟ್‍ಗಳಾಗಲೀ , ಮಾಸ್ಕ್‍ಗಳನ್ನಾಗಲೀ ನೀಡಿಲ್ಲ.
ನಮಗೆ ರಕ್ಷಣೆ ಇಲ್ಲ ಎಂದ ಮೇಲೆ ಕೆಲಸ ಮಾಡುವುದು ಹೇಗೆ ಎಂದು ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದರು.24 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತರು ಹಾಗೂ ಅವರ ಸಂಬಂಧಿಕರು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಓಡಾಡುತ್ತಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ನಮಗೂ ರೋಗ ತಗುಲುವ ಅಪಾಯವಿದೆ ಎಂದು ಪ್ರತಿಭಟನಾ ನಿರತ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಪಾದರಾಯನಪುರದ ಮಹಿಳೆಯನ್ನು ಹೆರಿಗೆಗೆ ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆ ಮಹಿಳೆಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಇಂದು ಬೆಳಗಿನ ಜಾವ ಆ ಮಹಿಳೆಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದ್ದು, ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈ ಹಿಂದೆಯೂ ಕೂಡ ಸೋಂಕಿತರನ್ನು ಇಲ್ಲಿ ಕರೆ ತರಲಾಗಿತ್ತು.
ಆದರೆ ನಮಗೆ ಸರಿಯಾದ ಸುರಕ್ಷತಾ ಕಿಟ್‍ಗಳನ್ನು ನೀಡುತ್ತಿಲ್ಲ. ಸೋಂಕಿತರ ಸಂಬಂಧಿಕರು ಹೇಗೆ ಬೇಕೋ ಹಾಗೆ ಓಡಾಡುತ್ತಿರುವುದನ್ನು ನಿಯಂತ್ರಣ ಕೂಡ ಮಾಡುತ್ತಿಲ್ಲ. ಹಾಗಾಗಿ ನಮಗೂ ಸೋಂಕು ತಗುಲುವ ಭೀತಿ ಹೆಚ್ಚಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ನಾವು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.
ಈ ಸಂಬಂಧ ಆಸ್ಪತ್ರೆಯ ಅಧೀಕ್ಷಕರಾದ ಗೀತಾ ಅವರು ಮಾತನಾಡಿ, ಪರಿಸ್ಥಿತಿ ಕುರಿತು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಇಂತಹ ಸಂದರ್ಭಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಪ್ರತಿಭಟನಾ ನಿರತರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.