ಬೆಂಗಳೂರು, ಏ.30- ಮದ್ಯದಂಗಡಿಗಳನ್ನು ಸದ್ಯಕ್ಕೆ ತೆರೆಯುವ ಯಾವುದೇ ಉದ್ದೇಶವನ್ನು ಸರ್ಕಾರ ಹೊಂದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂತ ಹಂತವಾಗಿ ಲಾಕ್‍ಡೌನ್ ಸಡಿಲಿಕೆ ಮಾಡುತ್ತಿದ್ದರೂ ಸದ್ಯಕ್ಕೆ ಮದ್ಯದಂಗಡಿ ತೆರೆಯುವ ಯಾವುದೇ ಉದ್ದೇಶ ಇಲ್ಲ ಎಂದರು.
ಒಂದು ವೇಳೆ ಮದ್ಯದಂಗಡಿಗಳನ್ನು ತೆರೆದರೆ ಬಡವರಿಗೆ ಮತ್ತು ಕಾರ್ಮಿಕರಿಗೆ ಹಂಚಿಕೆಯಾಗಿರುವ ಆಹಾರ ಸಾಮಗ್ರಿಗಳು, ಎಣ್ಣೆಗಾಗಿ ಖಾಲಿಯಾಗುವ ಸಾಧ್ಯತೆಯಿದ್ದು, ಕುಟುಂಬದವರು ಉಪವಾಸ ಬೀಳಲಿದ್ದಾರೆ. ಹೀಗಾಗಿ ಮದ್ಯದಂಗಡಿ ತೆರೆಯುವುದಿಲ್ಲ ಎಂದು ಅವರು ಹೇಳಿದರು.
ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸುವುದರ ಜತೆಗೆ ಇದೀಗ ಮಳೆಯಿಂದ ಉಂಟಾಗಿರುವ ಅನಾಹುತಗಳನ್ನು ಎದುರಿಸಬೇಕಾಗಿದೆ ಎಂದರು.ಇತ್ತೀಚೆಗೆ ಬಿದ್ದ ಮಳೆಯಿಂದ ನಗರದ ಬಹುತೇಕ ರಸ್ತೆಗಳು ಹಾಳಾಗಿವೆ.
ಕೆಲವು ಕಡೆ ಗೋಡೆ ಕುಸಿದು ಭಾರೀ ಅನಾಹುತವಾಗಿರುವುದರ ಬಗ್ಗೆಯೂ ಗಮನ ಹರಿಸಬೇಕಿದೆ. ಕೊರೊನಾ ನಿಯಂತ್ರಣದ ಸವಾಲಿನ ಜತೆಗೆ ಮಳೆ ಅನಾಹುತದ ಸವಾಲನ್ನೂ ಎದುರಿಸಲು ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈ ಕುರಿತಂತೆ ಇಂದು ಸಂಜೆ ಅಧಿಕಾರಿಗಳು ಮತ್ತು ಪಾಲಿಕೆ ಸದಸ್ಯರ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಅಶೋಕ್ ಹೇಳಿದರು.