ಲಕ್ನೋ: ಕೃಷಿಯು ಮಾಧ್ಯಮಿಕ ಶಿಕ್ಷಣ ಮಟ್ಟದಿಂದ ಪಠ್ಯದ ಭಾಗವಾಗಲಿದೆಯೇ? ಪ್ರಧಾನಿ ಮೋದಿಯವರು ಇಂಥದ್ದೊಂದು ಸುಳಿವನ್ನು ನೀಡಿದ್ದಾರೆ. ಮಾಧ್ಯಮಿಕ ಮಟ್ಟದಲ್ಲಿ ಕೃಷಿಯನ್ನು ಪಠ್ಯ ರೂಪದಲ್ಲಿ ಪರಿಚಯಿಸಲು ಸರಕಾರವು ಚಿಂತನೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಶುಕ್ರವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಉತ್ತರಪ್ರದೇಶದ ಝಾನ್ಸಿಯಲ್ಲಿ ರಾಣಿ ಲಕ್ಷ್ಮೀಬಾಯಿ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ಕಾಲೇಜು ಮತ್ತು ಆಡಳಿತಾತ್ಮಕ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಂದರ್ಭ ಅವರು ಈ ವಿಚಾರ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಕೃಷಿ ಕ್ಷೇತ್ರವನ್ನೂ ಆತ್ಮನಿರ್ಭರ (ಸ್ವಾವಲಂಬಿ) ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇರಿಸುವಂತೆ ಉತ್ತೇಜನ ನೀಡಿದ್ದಾರೆ.
ನಾವು ಸಂಶೋಧನೆಯನ್ನು ಕೃಷಿಯೊಂದಿಗೆ ಜೋಡಿಸಲು ಪ್ರಯತ್ನಿಸುತ್ತಿದ್ದೇವೆ.
ಈ ಉದ್ದೇಶ ಸಾಧನೆಯಲ್ಲಿ ವಿ.ವಿ.ಗಳು, ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಮಹತ್ವದ ಪಾತ್ರ ವಹಿಸಬಹುದು.
ಮಾಧ್ಯಮಿಕ ಶಿಕ್ಷಣ ಮಟ್ಟದಲ್ಲಿ ಕೃಷಿಯನ್ನು ಕೂಡ ಪಠ್ಯದ ವಿಷಯವನ್ನಾಗಿ ಪರಿಚಯಿಸಬೇಕಿದೆ. ಕೃಷಿ ಸಂಬಂಧಿ ಶಿಕ್ಷಣವನ್ನು ಮತ್ತು ಅದರ ಪ್ರಾಯೋಗಿಕ ಜಾರಿಯನ್ನು ಶಾಲೆಗಳತ್ತ ಕೊಂಡೊಯ್ಯಬೇಕಾದ್ದು ಮುಖ್ಯ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೃಷಿ ಕುರಿತು ಈಗಾಗಲೇ ತಿಳಿದಿರುವುದಕ್ಕಿಂತ ಹೆಚ್ಚಿನ ಮಾಹಿತಿ ಸಿಕ್ಕಿದಂತಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
Laxmi News 24×7