ಬೆಳಗಾವಿ: ‘ವಕ್ಫ್ ಕಾಯ್ದೆ ರದ್ದುಪಡಿಸಬೇಕು ಒತ್ತಾಯಿಸಿ ಹಾಗೂ ಈ ಕಾಯ್ದೆಯಿಂದ ಹಿಂದೂ ಧಾರ್ಮಿಕ ಸಂಸ್ಥೆಗಳ ಮೇಲೆ ಆಗುತ್ತಿರುವ ಅನ್ಯಾಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಇಲ್ಲಿನ ಸಂಭಾಜಿ ಉದ್ಯಾನದಲ್ಲಿ ನ.12ರಂದು ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದೇವೆ’ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಮುಖಂಡ ಬಸವರಾಜ ಭಾಗೋಜಿ ಹೇಳಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರದ ಕೊಲ್ಹಾಪುರದ ಕನ್ಹೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಭೆ ಉದ್ದೇಶಿಸಿ ಮಾತನಾಡುವರು. ಜಿಲ್ಲೆಯ ವಿವಿಧ ಮಠಾಧೀಶರು, ಸಂತರು, ಹಿಂದು ಸಮುದಾಯದ ಪ್ರಮುಖರು ಪಾಲ್ಗೊಳ್ಳುವರು. ಇದಕ್ಕೂ ಮುನ್ನ, ಸಂಜೆ 5.30ಕ್ಕೆ ಕಪಿಲೇಶ್ವರ ಮಂದಿರದಲ್ಲಿ ಆರತಿ ನೆರವೇರಿಸಿ, ಸಂಭಾಜಿ ಮೈದಾನದವರೆಗೆ ಮೆರವಣಿಗೆ ನಡೆಯಲಿದೆ’ ಎಂದರು.
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಕೃಷಿಭೂಮಿ, ಮಠ-ಮಾನ್ಯಗಳು ದೇವಾಲಯಗಳ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸುತ್ತಿರುವುದು ತಪ್ಪು. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.
ಮುಖಂಡರಾದ ಶಿವಾಜಿ ಶಹಾಪುರಕರ, ರೋಹನ ಜವಳಿ, ವಿಜಯ ಜಾಧವ, ಸುನೀಲ ಗೌರಣ್ಣ, ಕೃಷ್ಣಭಟ್ ಇತರರಿದ್ದರು.