ಬೆಂಗಳೂರು, : ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಅಂತ ಪರಿಗಣಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್ ನಲ್ಲಿ ಖಾಸಗಿ ಶಾಲಾ ಶಿಕ್ಷಕರು ಶಿಕ್ಷಕೇತರರನ್ನು ಪರಿಗಣಿಸಿಲ್ಲ. ಇಡೀ ಶಿಕ್ಷಣ ವ್ಯವಸ್ಥೆ ನಿರ್ನಾಮಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಾಂದಿ ಹಾಡಿದ್ದಾರೆ ಎಂದು ಆರೋಪಿಸಿರುವ ಖಾಸಗಿ ಶಾಲೆಗಳ ಶಿಕ್ಷಣ ಸಂಸ್ಥೆ ಪ್ರತಿನಿಧಿಗಳು ಅವರ ರಾಜೀನಾಮೆಗೆ ಆಗ್ರಹಿಸಿವೆ.
ರಾಜ್ಯದಲ್ಲಿ 3.5 ಲಕ್ಷ ಮಂದಿ ಶಿಕ್ಷಕರು ಇದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಖಾಸಗಿ ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರರ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವಂತೆ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುವ ಎಲ್ಲಾ ಶಾಸಕರು ಶಿಕ್ಷಣ ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬುಧವಾರ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್ ನಲ್ಲಿ ಐದು ಪೈಸೆ ನೆರವು ಘೋಷಣೆ ಮಾಡಿಲ್ಲ. ಶಿಕ್ಷಕರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿಫಲರಾಗಿದ್ದಾರೆ. ಇದರ ಹೊಣೆ ಹೊತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಶಿಕ್ಷಣ ಸಂಘಟನೆಗಳಾದ ಕ್ಯಾಮ್ಸ್, ಮಿಸ್ಕಾ, ಎಂಎಎಸ್, ಕುಸ್ಮಾ, ಎಬಿಇ, ಐಎಸ್‌ಎಫ್‌ಐ ಸಂಘಟನೆಗಳು ಆಗ್ರಹಿಸಿವೆ.
ಕೊರನಾ ಅಲೆಗೆ ಎಷ್ಟೋ ಶಿಕ್ಷಕರು ಬಲಿಯಾಗಿದ್ದಾರೆ. ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ಈಗಾಗಲೇ ಚುನಾವಣಾ ಕಾರ್ಯಗಳಿಗೆ ನಿಯೋಜನೆಗೊಂಡ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಎಷ್ಟೋ ಶಿಕ್ಷಕರು ಜೀವನೋಪಾಯಕ್ಕೆ ಪರದಾಡುತ್ತಿದ್ದಾರೆ. ಹೀಗಾಗಿ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವಂತೆ ಒತ್ತಾಯಿಸಿದ್ದೆವು. ಮುಖ್ಯಮಂತ್ರಿಗಳ ಗಮನ ಸೆಳೆದು ಶಿಕ್ಷಕರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ವಿಫಲರಾಗಿದ್ದಾರೆ. ಈ ಕೂಡಲೇ ರಾಜೀನಾಮೆ ನೀಡಬೇಕು. ಜತೆಗೆ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸಿ ಶಾಸಕರಾಗಿರುವರು ಸಹ ಸ್ವಯಂ ಪ್ರೇರಿತವಾಗಿ ರಾಜೀನಾಮೆ ಸಲ್ಲಿಸಿ ಶಿಕ್ಷಕರ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆಗ್ರಹಿಸಿದ್ದಾರೆ.

ಕಳ್ಳ ಮಳ್ಳ ಪಾಲಿಸಿ : ಕೊರೊನಾ ಎರಡನೇ ಅಲೆ ಭೀತಿ ಎದುರಾಗಿದೆ. ಎಲ್ಲಾ ಮಕ್ಕಳನ್ನು ಕಡ್ಡಾಯವಾಗಿ ದಾಖಲಾತಿ ಮಾಡಿಕೊಳ್ಳಬೇಕು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅಧಿಕಾರಿಗಳ ಮೂಲಕ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಸಚಿವ ಒತ್ತಡ ಹಾಕಿಸುತ್ತಾರೆ. ಆದರೆ ಪೋಷಕರಿಗೆ ನೀವು ಯಾರೂ ಶುಲ್ಕ ಕಟ್ಟಬೇಡಿ, ದಾಖಲಾತಿಗೆ, ಶುಲ್ಕದ ಬಗ್ಗೆ ಬಲವಂತ ಮಾಡಿದರೆ ದೂರು ಕೊಡಿ ಎಂದು ಪೋಷಕರನ್ನು ಎತ್ತಿಕೊಟ್ಟುವ ಕೆಲಸ ಮಾಡಿಕೊಂಡೇ ಶಿಕ್ಷಣ ಸಚಿವರು ಕಾಲ ಕಳೆದರು. 24 ಸಾವಿರ ಕೋಟಿ ರೂ. ಅನುದಾನ ಇರುವ ಶಿಕ್ಷಣ ಇಲಾಖೆಯಲ್ಲಿ ಕಳೆದ ವರ್ಷ ಬಹುತೇಕ ಯೋಜನೆಗಳು ಸ್ಥಗಿತಗೊಂಡಿವೆ. ಕನಿಷ್ಠ ಒಂದು ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಮಾಡಲಾಗದ ಅಸಮರ್ಥತೆ ತೋರಿರುವ ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಲು ಅರ್ಹರಲ್ಲ. ಈ ಕೂಡಲೇ ರಾಜೀನಾಮೆ ನೀಡುವುದು ಸೂಕ್ತ. ಶಿಕ್ಷಕರಿಗೆ ಆಗಿರುವ ಅನ್ಯಾಯದಿಂದ ಕೈ ಕಟ್ಟಿ ಕೂರುವುದಿಲ್ಲ. ಬಹುದೊಡ್ಡ ಹೋರಾಟ ನಡೆಯಲಿದೆ ಎಂದು ಕ್ಯಾಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

600 ಕೋಟಿ ಆರ್‌ಟಿಇ ಬಾಕಿ : ರಾಜ್ಯದ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅಡಿ ಸೀಟು ಪಡೆದು ವಿದ್ಯಾರ್ಥಿಗಳಿಗೆ ಪಾವತಿಸಬೇಕಾಗಿರುವ 600 ಕೋಟಿ ರೂ. ಶುಲ್ಕ ಸರ್ಕಾರ ಬಾಕಿ ಇರಿಸಿಕೊಂಡಿದೆ. ಅಧಿಕಾರಿಗಳು ಲಂಚಕ್ಕಾಗಿ ಅನುದಾನ ನೀಡದೇ ಶಿಕ್ಷಣ ಸಂಸ್ಥೆಗಳನ್ನು ಅಲೆಸುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆ ಕಾಪಾಡುವ ನಂಬಿಕೆ ಇಲ್ಲದಂತಾಗಿದೆ. ಪಾಲಕ ಪೋಷಕರಲ್ಲಿ ಗೊಂದಲ ಮೂಡಿಸಿ ಶಿಕ್ಷಕರಿಗೆ ಸಂಬಳ ಕೊಡಲಾಗದ ಸ್ಥಿತಿಯನ್ನು ಶಿಕ್ಷಣ ಸಚಿವರು ಸೃಷ್ಟಿಸಿದ್ದಾರೆ. ರಾಜ್ಯದಲ್ಲಿ ಶಿಕ್ಷಕರ ಸಾವಿಗೆ ಎಸ್. ಸುರೇಶ್ ಕುಮಾರ್ ಅವರೇ ಹೊಣೆ. ಶಿಕ್ಷಣ ಸಚಿವರ ಉದ್ಧಟನ ಖಂಡಿಸಿ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುವ ಎಲ್ಲಾ ಶಾಸಕರು ರಾಜೀನಾಮೆ ನೀಡಿ ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕ್ಯಾಮ್ಸ್, ಕುಸುಮಾ ಒಳಗೊಂಡಂತೆ ರಾಜ್ಯದ ಶಿಕ್ಷಣ ಸಂಸ್ಥೆ ಸಂಘಟನೆಗಳು ಆಗ್ರಹಿಸಿವೆ.