Breaking News

ಧಾರಾವಾಹಿ ಶೂಟಿಂಗ್‍ಗೆ ಸರ್ಕಾರದಿಂದ ಅನುಮತಿ..!

Spread the love

ಬೆಂಗಳೂರು : ಲಾಕ್‍ಡೌನ್ ನಿಂದಾಗಿ ಸ್ಥಗಿತಗೊಂಡಿರುವ ಧಾರಾವಾಹಿ ಶೂಟಿಂಗ್‍ಗಳಿಗೆ ಸರ್ಕಾರ ಅನುಮತಿ ನೀಡಿ ಮಹತ್ವದ ನಿರ್ಧಾರ ಪ್ರಕಟಿಸಿದೆ. ಲಾಕ್‌ಡೌನ್‌ನಿಂದ ಕಿರುತೆರೆಯ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದು ಒಂದೂವರೆ ತಿಂಗಳಾಗಿವೆ. ಈ ಮಧ್ಯೆ ಲಾಕ್‌ಡೌನ್ ಕೊಂಚ ಸಡಲಿಕೆಯಾಗಿರುವುದರಿಂದ ಮತ್ತು ಬೇರೆ ಬೇರೆ ವಲಯಗಳಲ್ಲಿ ಕೆಲಸ ಪ್ರಾರಂಭವಾಗುತ್ತಿರುವುದರಿಂದ, ಕಿರುತೆರೆಯ ಚಿತ್ರೀಕರಣಕ್ಕೂ ಅನುವು ಮಾಡಿಕೊಡಬೇಕೆಂದು ಹಲವರು ಇದೀಗ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಈ ಕುರಿತು ಮಂಗಳವಾರ ಮಾತನಾಡಿದ್ದ ಕಂದಾಯ ಸಚಿವ ಆರ್​. ಅಶೋಕ್​, ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣ ಮಾಡುವುದರ ಕುರಿತಾಗಿ ಬುಧವಾರ ಮುಖ್ಯಮಂತ್ರಿಗಳ ಜತೆಗೆ ಚರ್ಚೆ ಮಾಡಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರು.

ಅದರಂತೆ, ಸೋಮವಾರದಿಂದ ಚಿತ್ರೀಕರಣ ಮಾಡಬಹುದು ಎಂಬ ಅನುಮತಿ ಇಂದು ಸಿಕ್ಕಿದೆ. ಚಿತ್ರೀಕರಣ ಮಾಡುವ ಮನವಿಗೆ ಸರ್ಕಾರದಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದ್ದಿಕ್ಕೆ ಕರ್ನಾಟಕ ಟೆಲಿವಿಷನ್​ ಅಸೋಸಿಯೇಷನ್​ ಅಧ್ಯಕ್ಷ ಶಿವಕುಮಾರ್​ ಸಂತಸ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಧಾರಾವಾಹಿಗಳ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ನೀಡಲಾಗಿದೆಯಾದರೂ, ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಪ್ರಮುಖವಾಗಿ ಒಳಾಂಗಣದಲ್ಲಷ್ಟೇ ಚಿತ್ರೀಕರಣ ಮಾಡುವುದಕ್ಕೆ ಅನುಮತಿಯನ್ನು ನೀಡಲಾಗಿದೆ.

ಆರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಧಾರಾವಾಹಿ ಶೂಟಿಂಗ್ ಮೇಲೆ ಅವಲಂಬಿತರಾಗಿದ್ದಾರೆ. ಪರಿಣಾಮ ಸರ್ಕಾರ ನಿಯಮಗಳ ಅನ್ವಯ ಮನೆಯ ಒಳಗೆ ನಡೆಯುವ ಶೂಟಿಂಗ್‍ಗಳಿಗೆ ಮಾತ್ರ ಅವಕಾಶ ನೀಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.

ಕೊರೊನಾ ಸಂಬಂಧ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಲು ಅನುಮತಿ ನೀಡಲಾಗಿದೆ. ಆದರೆ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಇಲ್ಲ. ಅಲ್ಲದೇ ಸಿನಿಮಾ ಹಾಗೂ ರಿಯಾಲಿಟಿ ಶೋಗಳ ಶೂಟಿಂಗ್‍ಗೆ ಅನುಮತಿ ನೀಡಿಲ್ಲ. ಮನೆಯ ಒಳಭಾಗದಲ್ಲಿ ನಡೆಸಲಾಗುವ ಧಾರಾವಾಹಿ ಶೂಟಿಂಗ್‍ಗೆ ಮಾತ್ರ ಅನುಮತಿ ನೀಡಲಾಗಿದೆ.

ಈ ಕುರಿತು ನಿನ್ನೆಯೇ ಮಾಹಿತಿ ನೀಡಿದ್ದ ಸಚಿವ ಆರ್. ಅಶೋಕ್ ಅವರು, ಸಿನಿಮಾ, ಧಾರಾವಾಹಿ ಶೂಟಿಂಗ್ ಯಾವಾಗ ಮಾಡಬಹುದು ಎಂದು ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ಪಡಿಸುವುದಾಗಿ ಹೇಳಿದ್ದರು. ಅಲ್ಲದೇ ಶೂಟಿಂಗ್ ವೇಳೆ ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸೂಚನೆ ನೀಡಲಾಗುವುದು ಎಂದಿದ್ದರು.

ಇತ್ತ ಮೇ 11ರಿಂದ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಚಿತ್ರೀಕರಣಕ್ಕೆ ಅನುವು ಮಾಡಿಕೊಂಡುವಂತೆ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ.ಶಿವಕುಮಾರ್ ಭಾನುವಾರ ಸಿಎಂ ಬಳಿ ಮನವಿ ಮಾಡಿಕೊಂಡಿದ್ದರು. ಕೊರೊನಾದಿಂದ ಮಾರ್ಚ್ 19ರಿಂದ ಕಿರುತೆರೆಯ ಶೂಟಿಂಗ್‍ಗೆ ಬ್ರೇಕ್ ಹಾಕಿತ್ತು.

ಹೀಗಾಗಿ ಮತ್ತೆ ರಾಜ್ಯ ಸರ್ಕಾರದ ವತಿಯಿಂದ ಶೂಟಿಂಗ್ ಪ್ರಾರಂಭಿಸಲು ಅನುಮತಿ ಕೊಡಿ ಎಂದು ಎಸ್.ವಿ.ಶಿವಕುಮಾರ್ ಸಿಎಂ ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟಿದ್ದರು. ಅಲ್ಲದೇ ಮೇ 4 ರಿಂದ ರಾಜ್ಯದಲ್ಲಿ ಗ್ರೀನ್ ಮತ್ತು ಆರೆಂಜ್ ಝೋನ್‍ಗಳಲ್ಲಿ ಲಾಕ್‍ಡೌನ್ ಸಡಿಲಿಕೆಯಾಗಿದೆ.

ಇದೇ ನಿಟ್ಟಿನಲ್ಲಿ ನಮ್ಮ ಕ್ಷೇತ್ರಕ್ಕೂ ಸಡಿಲಿಕೆ ಮಾಡಬೇಕು. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದರೆ ಒಳ್ಳೆಯದಾಗುತ್ತದೆ. ಅಂದಾಜು 120 ಧಾರಾವಾಹಿಗಳ ಶೂಟಿಂಗ್ ನಡೆಯುತ್ತಿದ್ದು, 20 ಸಾವಿರ ಕಲಾವಿದರು, ತಂತ್ರಜ್ಞರು ಇದರ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ನಮ್ಮ ಕ್ಷೇತ್ರಕ್ಕೆ ಅನುಮತಿ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದರು.


Spread the love

About Laxminews 24x7

Check Also

ನಮ್ಮ ಬೆಂಗಳೂರಿನಲ್ಲಿರುವ ಕ್ರಿಕೆಟ್ ಕ್ರೀಡಾಂಗಣದ ಹೆಸರಿರೋದು ಎಂ. ಚಿನ್ನಸ್ವಾಮಿ ಅವರ ಹೆಸರಲ್ಲಿ. ಅಷ್ಟೊಂದು ಘಟಾನುಘಟಿ ಕ್ರಿಕೆಟ್ ಪಟುಗಳಿದ್ದ ನಮ್ಮ ರಾಜ್ಯದಲ್ಲಿ ಇಂತಹ ದೊಡ್ಡ ಕ್ರಿಕೆಟ್ ಸ್ಥಾವರಕ್ಕೆ ಇವರ ಹೆಸರಿರಬೇಕಾದರೆ ಈ ಮಹನೀಯರ ಸಾಮರ್ಥ್ಯ ಎಂತದ್ದಿರಬಹುದು!

Spread the loveಎಂ. ಚಿನ್ನಸ್ವಾಮಿ ನಮ್ಮ ಬೆಂಗಳೂರಿನಲ್ಲಿರುವ ಕ್ರಿಕೆಟ್ ಕ್ರೀಡಾಂಗಣದ ಹೆಸರಿರೋದು ಎಂ. ಚಿನ್ನಸ್ವಾಮಿ ಅವರ ಹೆಸರಲ್ಲಿ. ಅಷ್ಟೊಂದು ಘಟಾನುಘಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ