ಬೆಂಗಳೂರು: ಮೂರನೇ ಹಂತದ ಲಾಕ್ ಡೌನ್ ಅವಧಿ ಮುಗಿಯುತ್ತಾ ಬಂದರೂ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಒಂದೇ ದಿನದಲ್ಲಿ 42 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಇಂದು ಬರೋಬ್ಬರಿ 15 ಜನರಲ್ಲಿ ಸೋಂಕು ದೃಢವಾಗಿದೆ. ಧಾರವಾಡದಲ್ಲಿ 9, ಹಾಸನ 5, ಬೆಂಗಳೂರು 3,ಯಾದಗಿರಿ 2, ದಕ್ಷಿಣ ಕನ್ನಡದಲ್ಲಿ 2, ಚಿಕ್ಕಬಳ್ಳಾಪುರ 1, ಕಲಬುರಗಿ 1 ಪ್ರಕರಣ ಪತ್ತೆಯಾಗಿದೆ.
ಇಂದು ಸೋಂಕು ಪತ್ತೆಯಾದ 42 ಜನರ ಪೈಕಿ 25 ಜನರಿಗೆ ಅಹಮದಾಬಾದ್ ನಂಟು ಇದ್ದು, ಇವರೆಲ್ಲ ಅಹಮದಾಬಾದ್ ತಬ್ಲಿಗ್ ಜಮಾತ್ ಗೆ ಹೋಗಿ ಬಂದವರಾಗಿದ್ದಾರೆ.