ಬೆಂಗಳೂರು: ಕಾಲಾಯ ತಸ್ಮೈ ನಮಃ. ಯಾವ ಕಾಲದಲ್ಲಿ ಹೇಗೆ ಇರಬೇಕು ಹಾಗೆ ಇರಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸರ್ಕಾರದ ವಿರುದ್ಧ ಮಾರ್ಮಿಕವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಶಾಸಕರು, ನಾನು ತಲೆ ಬಗ್ಗಿಸಿ ನಡೆಯುತ್ತಿದ್ದೇನೆ ಅಂದರೆ ಮುಂದೆ ಒಳ್ಳೆಯದು ಆಗುತ್ತೆ ಅಂತ ಅರ್ಥ. ಅನುದಾನ, ನಾಯಕತ್ವ, ಅಧಿಕಾರಿಗಳ ವರ್ಗದ ಬಗ್ಗೆ ಮಂತ್ರಿ ಆಗುವ ಬಗ್ಗೆ ಚರ್ಚೆ ಆಗಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕ್ಯಾಬಿನೆಟ್‍ನಲ್ಲಿ ಮಂತ್ರಿ ಆಗುವುದಿಲ್ಲ. ಅಭಿವೃದ್ಧಿ ಸಲುವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಮಾಧಾನ ಇದೆಯೋ, ಅಸಮಾಧಾನ ಇದೆಯೋ ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸುತ್ತೇವೆ. ನನಗೆ ಸಚಿವನಾಗುವ ಮನಸ್ಸು ಇಲ್ಲ. ಸಚಿವನಾಗದಿರಲು ನಾನೇ ನಿರ್ಧಾರ ಮಾಡಿದ್ದೇನೆ. ನಾವು ಯಾವುದೇ ಸಭೆ ಮಾಡಿಲ್ಲ, ಊಟಕ್ಕೆ ಸೇರಿದ್ವಿ ಅಷ್ಟೇ. ಆದರೆ ಅದು ರಾಜ್ಯಸಭೆ ಚುನಾವಣೆಗೆ ನಡೆದ ಸಭೆ ಅಂತ ವರದಿಯಾಯ್ತು. ರೊಟ್ಟಿ ತಿಂದಿದ್ದು ಸುದ್ದಿ ಆಯ್ತು ಎಂದರು.
ಸಿಎಂ ಯಡಿಯೂರಪ್ಪ ಅವರನ್ನ ಈ ಹಿಂದೆ ಅನೇಕ ಬಾರಿ ಭೇಟಿಯಾಗಿದ್ದೇನೆ. ಅವಶ್ಯಕತೆ ಇದ್ದರೆ ಮತ್ತೆ ಭೇಟಿ ಆಗುತ್ತೇನೆ. ನಮಗೆ ಯಾವುದೇ ಅಸಮಾಧಾನ ಇಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಅಸಮಾಧಾನಗೊಳ್ಳುತ್ತೇನೆ. ಮಂತ್ರಿ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡಿಲ್ಲ ಮಾಡುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊರೊನಾ ನಿಯಂತ್ರಣದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರ ಕೆಲಸವನ್ನ ಮಾಧ್ಯಮಗಳು ಚೆನ್ನಾಗಿ ಹೊಗಳಿವೆ. ಅವರನ್ನು ಅಭಿನಂದನೆ ಸಲ್ಲಿಸಬೇಕು ಅಂತ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೇಳಿದ್ದೇವೆ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.