ಬೆಂಗಳೂರು: ರಾಜ್ಯಕ್ಕೆ ಇಂದು ಮುಂಬೈ ಮತ್ತು ದೆಹಲಿಯಿಂದ ರೈಲುಗಳು ಆಗಮಿಸಿದ್ದು, ಕರುನಾಡಿನಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಾ ಆತಂಕ ಮನೆ ಮಾಡಿದೆ.
ಮುಂಬೈ ರೈಲಿನಲ್ಲಿ ಬಂದವರಿಗೆ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಿದ್ದು, ಆ ಬಳಿಕ ಮನೆಯಲ್ಲಿ ಏಳು ದಿನ ಹೋಮ್ ಕ್ವಾರಂಟೈನ್ ನಲ್ಲಿರಬೇಕು. ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, ವೃದ್ಧರಿಗೆ ಸಾಂಸ್ಥಿಕ ಕ್ವಾರಂಟೈನ್‍ನಿಂದ ವಿನಾಯ್ತಿ ಸಿಗಲಿದೆ. ಕ್ವಾರಂಟೈನ್ ಅವಧಿಯಲ್ಲಿ ಎಲ್ಲರೂ ಕೋವಿಡ್-19 ಪರೀಕ್ಷೆಗೆ ಒಳಗಾಗಬೇಕು.
ಮುಂಬೈನಿಂದ ಬಂದಿರೋ ಉದ್ಯಾನ್ ಎಕ್ಸ್‌ಪ್ರೆಸ್ ಸೋಮವಾರವೇ ರಾಜ್ಯ ಪ್ರವೇಶಿಸಿದ್ದು, ಯಾದಗಿರಿಯ ರೈಲ್ವೇ ನಿಲ್ದಾಣದಲ್ಲಿ 54 ಜನರು ಇಳಿದಿದ್ದಾರೆ. ಎಲ್ಲರನ್ನು ಸೈದಾಪುರ ರಾಣಿಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದೇ ರೈಲಿನಲ್ಲಿ ಯಾದಗಿರಿಯಿಂದ ಬೆಂಗಳೂರಿಗೆ 25 ಜನರು ಪ್ರಯಾಣಿಸಿದ್ದಾರೆ.
ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಿಂದ ಕಲಬುರಗಿಯಲ್ಲಿ 119 ಜನ ಆಗಮಿಸಿದ್ದು, ಇದರಲ್ಲಿ 98 ಜನ ಕಲಬುರಗಿ, 20 ಜನ ವಾಡಿ, ಒಬ್ಬರು ಶಹಾಬಾದ್ ಮೂಲದವರಾಗಿದ್ದಾರೆ. ಎಲ್ಲ 119 ಜನರನ್ನು ಕಲಬುರಗಿಯ ವಿವಿಧ ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ರಾಯಚೂರಿಗೆ ರಾಯಲ್ ಸೀಮಾ ಎಕ್ಸ್‌ಪ್ರೆಸ್ ಮತ್ತು ಉದ್ಯಾನ್ ಎಕ್ಸ್‌ಪ್ರೆಸ್ ನಿಂದ ಒಟ್ಟು 110 ಜನ ಬಂದಿದ್ದಾರೆ. ಉದ್ಯಾನ್ ಎಕ್ಸ್‍ಪ್ರೆಸ್‍ನಿಂದ ಬಂದವರನ್ನು ಏಳು ದಿನದ ಸಾಂಸ್ಥಿಕ ಕ್ವಾರಂಟೈನ್ ಗೆ ಶಿಫ್ಟ್ ಮಾಡಲಾಗಿದೆ. ರಾಯಲ್ ಸೀಮಾ ಎಕ್ಸ್‌ಪ್ರೆಸ್ ಪ್ರಯಾಣಿಕರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.