ರಾಯಚೂರು/ಕೋಲಾರ: ಅನೇಕ ದಿನಗಳಿಂದ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಇದರಿಂದ ಜನರ ಜೀವನ ಅಸ್ತವ್ಯಸ್ತವಾಗುತ್ತಿದೆ.
ರಾಯಚೂರಿನಲ್ಲಿ ಇಡೀ ರಾತ್ರಿ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ಮಳೆಗೆ ಚರಂಡಿ ನೀರು ಮನೆಯೊಳಗೆ ನುಗ್ಗಿದೆ. ನಗರದ ಮಡ್ಡಿಪೇಟೆ, ಬಂದರಗಲ್ಲಿ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಮನೆಗಳಿಗೆ ಮಳೆಯ ನೀರಿನೊಂದಿಗೆ ಕೊಳಚೆ ನೀರು ನುಗ್ಗಿದೆ. ಇದರಿಂದ ಜನರು ರಾತ್ರಿಯೆಲ್ಲಾ ಮನೆಯೊಳಗೆ ನುಗ್ಗಿದ ನೀರನ್ನು ಹೊರಹಾಕಿದ್ದಾರೆ.
ಮನೆಗೆ ಚರಂಡಿ ನೀರು ನುಗ್ಗಿದ ಪರಿಣಾಮ ನಗರಸಭೆಯ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು ಮುಂಜಾನೆಯೂ ನಗರದಲ್ಲಿ ಜಿಟಿಜಿಟಿ ಮಳೆ ಮುಂದುವರಿದೆ. ಈ ಮಳೆಯಿಂದಾಗಿ ಹಲವು ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಇತ್ತ ಕೋಲಾರದಲ್ಲಿ ಕಳೆದ ಮೂರು ದಿನಗಳಿಂದ ಬಿರುಗಾಳಿ ಸಹಿತ ಮಳೆ ಹಿನ್ನೆಲೆಯಲ್ಲಿ ಹತ್ತಾರು ಎಕರೆ ಬಾಳೆ ತೋಟ ನಾಶವಾಗಿದೆ. ಅಷ್ಟೇ ಅಲ್ಲದೇ ಅನೇಕ ಮನೆ ಕುಸಿತವಾಗಿದ್ದು, ಚೆಕ್ ಪೋಸ್ಟ್ ಕೂಡ ಹಾರಿ ಹೋಗಿವೆ. ಬಿರುಗಾಳಿ ಮಳೆಗೆ ಕೋಲಾರ ತಾಲೂಕಿನ ರಾಜಕಲ್ಲಹಳ್ಳಿ ಗ್ರಾಮದ ರೈತ ನಾಗೇಶ್ ಕ್ಯಾಪ್ಸಿಕಂ ತೋಟ ಸಂಪೂರ್ಣ ನಾಶವಾಗಿದೆ. ನಾಗೇಶ್ ಸುಮಾರು ಮೂರು ಎಕರೆಯಲ್ಲಿ ಕ್ಯಾಪ್ಸಿಕಂ ಬೆಳೆ ಬೆಳೆದಿದ್ದರು. ಆದರೆ ಮಳೆಯಿಂದ ಸಂಪೂರ್ಣ ನಾಶವಾಗಿದೆ.
ಮಳೆಯಿಂದ ಜಿಲ್ಲೆಯ ಕೆಜಿಎಫ್ ತಾಲೂಕಿನ ಮಡಿವಾಳ ಮನೋಹರ್ ಎಂಬವರ ಸುಮಾರು 8 ಎಕರೆ ಬಾಳೆ ತೋಟ ನಾಶವಾಗಿದೆ. ಬಂಗಾರಪೇಟೆ ತಾಲೂಕಿನ ಕನುಮನಹಳ್ಳಿ ಬಳಿ ನಿರ್ಮಿಸಿದ ಗಡಿ ಚೆಕ್‍ಪೋಸ್ಟ್ ನಾಶವಾಗಿದೆ. ಇನ್ನೂ ದೋಣಿಮಡಗು ಸುತ್ತಮುತ್ತ ಆಲಿಕಲ್ಲು ಮಳೆಯಿಂದ ಬೆಳೆಗಳು ನಾಶವಾಗಿದೆ. ಕೆಜಿಎಫ್ ನಗರದ ಡಿ.ಬ್ಲಾಕ್‍ನಲ್ಲಿ ಮನೆ ಕುಸಿತವಾಗಿದೆ,
ಬೆಂಗಳೂರು, ಹಾಸನ, ತುಮಕೂರು ಮತ್ತು ಮೈಸೂರು ಸೇರಿದಂತೆ ಅನೇಕ ಕಡೆ ಭರ್ಜರಿ ಮಳೆಯಾಗಿದೆ. ಇದರಿಂದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯ ಆಗಿದೆ.