ಚೆನ್ನೈ: ತಮಿಳುನಾಡಿನಲ್ಲಿ ಏ.6ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟದ ನಡುವಣ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಂಡಿದ್ದು, ಬಿಜೆಪಿ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಈ ಹಿಂದೆ 60 ಕ್ಷೇತ್ರಕ್ಕೆ ಬಿಜೆಪಿ ಬೇಡಿಕೆ ಇಟ್ಟಿತ್ತು. ಆದರೆ ಕೇವಲ 20 ಕ್ಷೇತ್ರಗಳನ್ನು ಮಾತ್ರ ಎಐಎಡಿಎಂಕೆ ಬಿಟ್ಟುಕೊಟ್ಟಿದೆ.
ಇದೇ ವೇಳೆ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಬಿಜೆಪಿಯನ್ನು ಬೆಂಬಲಿಸುವುದಾಗಿ ಎಐಎಡಿಎಂಕೆ ಘೋಷಿಸಿದೆ. ಈ ಬೆನ್ನಲ್ಲೇ ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ವಸಂತ ಕುಮಾರ್ ವಿರುದ್ಧ ಪರಾಭವಗೊಂಡಿದ್ದ ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರನ್ನೇ ಈ ಬಾರಿ ಕನ್ಯಾಕುಮಾರಿಯಿಂದ ಕಣಕ್ಕಿಳಿಸುವುದಾಗಿ ಬಿಜೆಪಿ ಘೋಷಿಸಿದೆ.