ನವದೆಹಲಿ: ಬಡ ವ್ಯಕ್ತಿಯೊಬ್ಬನ ರಿಕ್ಷಾವನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿರುವ ಮನಕಲಕುವ ವಿಡಿಯೋವೊಂದು ಕೆಲದಿನಗಳಿಂದ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಭಾರತದಲ್ಲಿ ನಡೆದಿದೆ ಎಂಬುದು ಕೆಲವರ ವಾದ. ಆದರೆ, ಘಟನೆಯ ನಿಜಾಂಶ ಫ್ಯಾಕ್ಟ್ಚೆಕ್ನಿಂದ ಬಯಲಾಗಿದೆ.
ದೇಶದ ಅನೇಕ ಜಾಲತಾಣಿಗರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಈ ದೇಶದ ಕಾನೂನು ಕೇವಲ ಬಡವರಿಗೆ ಮಾತ್ರ ಎಂದು ಅಡಿಬರಹ ಬರೆದು, ಭಾರತ, ನರೇಂದ್ರಮೋದಿ, ಬಿಜೆಪಿ ಮತ್ತು ಅರವಿಂದ್ಕೇಜ್ರಿವಾಲ್ ಎಂಬ ಹ್ಯಾಷ್ಟ್ಯಾಗ್ನಿಂದವಿಡಿಯೋ ವೈರಲ್ ಮಾಡಿದ್ದಾರೆ.
ರಿಕ್ಷಾ ವಶಕ್ಕೆ ಪಡೆದಿರುವ ಘಟನೆ ನಡೆದಿದ್ದು ಭಾರತದಲ್ಲಲ್ಲ, ಬದಲಾಗಿ ಪಕ್ಕದ ಬಾಂಗ್ಲಾದೇಶದಲ್ಲಿ. ಢಾಕಾದ ಸರ್ಕಾರಿ ಅಧಿಕಾರಿಗಳು ಈ ಅಮಾನವೀಯ ಕೆಲಸ ಮಾಡಿದವರು.
ವಿಡಿಯೋದಲ್ಲಿ ಗಮನಹರಿಸಲಾಗ ಕೆಲವು ಪದಗಳು ಬಾಂಗ್ಲಾ ಭಾಷೆಯಲ್ಲಿರುವುದನ್ನು ನೋಡಬಹುದಾಗಿದೆ. ವಿಡಿಯೋದಲ್ಲಿರುವ ಸ್ಟೋರ್ಗಳಲ್ಲಿಯೂ ಸಹ ಬಾಂಗ್ಲಾ ಭಾಷೆಯಲ್ಲೇ ಬರೆಯಲಾಗಿದೆ. ಇನ್ನು ಸಂತ್ರಸ್ತ ವ್ಯಕ್ತಿಯ ಮುಂದೆ ಹಿಡಿದಿರುವ ನ್ಯೂಸ್ ಚಾನೆಲ್ ಮೈಕ್ನಲ್ಲೂ ಸಹ ಜಮುನಾ ಟಿವಿ ಎಂಬ ಲೋಗೋ ಇದೆ. ಇದು ಬಾಂಗ್ಲಾದೇಶದ ಮೂಲದ ನ್ಯೂಸ್ ಚಾನೆಲ್ ಆಗಿದೆ.
ಸೂಕ್ತ ಕೀವರ್ಡ್ಸ್ಗಳ ಸಹಾಯದಿಂದ ಗೂಗಲ್ನಲ್ಲಿ ಹುಡುಕಾಡಿದಾಗ ಘಟನೆಗೆ ಸಂಬಂಧಿಸಿದ ಮಾಹಿತಿ ದೊರಕಿತು. ಈ ಘಟನೆ ಬಾಂಗ್ಲಾ ರಾಜಧಾಣಿ ಢಾಕಾದಲ್ಲಿ ನಡೆದಿದೆ. ವಿಡಿಯೋದಲ್ಲಿ ಅಳುತ್ತಿರುವ ವ್ಯಕ್ತಿಯನ್ನು ಫಜ್ಲುರ್ ರಹಮಾನ್ ಎಂದು ಗುರುತಿಸಲಾಗಿದ್ದು, ಢಾಕಾ ದಕ್ಷಿಣ ನಗರದ ಕಾರ್ಪೋರೇಷನ್ ಅಧಿಕಾರಿಗಳು ಒಕ್ಕಲೆಬ್ಬಿಸುವ ಸಮಯದಲ್ಲಿ ರಿಕ್ಷಾವನ್ನು ವಶಕ್ಕೆ ಪಡೆದಿದ್ದರು.
ವರದಿಯ ಪ್ರಕಾರ ಕರೊನಾ ಹಿನ್ನೆಲೆಯಲ್ಲಿ ತನ್ನ ಹಿಂದಿನ ಕೆಲಸವನ್ನು ಕಳೆದುಕೊಂಡಿದ್ದ ಫಜ್ಲುರ್, ಲೋನ್ ಮೂಲಕ ಸುಮಾರು 80 ಸಾವಿರ ರೂ. ಮೌಲ್ಯದ ಬ್ಯಾಟರಿ ಪವರ್ವುಳ್ಳು ರಿಕ್ಷಾ ಕೊಂಡಿದ್ದರು. ಆದರೆ, ಅಕ್ಟೋಬರ್ 5ರಂದು ಬ್ಯಾಟರಿ ಪವರ್ವುಳ್ಳು ರಿಕ್ಷಾವನ್ನು ಹೊರಹಾಕುವ ಕಾರ್ಯಾಚರಣೆಗೆ ಇಳಿದ ಢಾಕಾ ದಕ್ಷಿಣ ನಗರದ ಕಾರ್ಪೋರೇಷನ್ ಅಧಿಕಾರಿಗಳು ಫಜ್ಲುರ್ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದರು.
ಢಾಕಾ ಟ್ರಿಬ್ಯೂನ್ ಸಹ ವರದಿ ಮಾಡಿದ್ದು, ಮನಕಲಕುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಾಂಗ್ಲಾ ಮೂಲದ ಶ್ವಪ್ನೋ ಹೆಸರಿನ ಗ್ರಾಸರಿ ಡೆಲಿವರಿ ಸರ್ವೀಸ್ ಕಂಪನಿ ಮುಂದೆ ಬಂದು ಎರಡು ರಿಕ್ಷಾ ತೆಗೆದುಕೊಡುವುದಾಗಿ ಭರವಸೆ ನೀಡಿತು. ಅದರಂತೆ ಸಹಾಯವನ್ನೂ ಮಾಡಿತು. ಇದೇ ವರದಿಯನ್ನು ಅನೇಕ ವೆಬ್ಸೈಟ್ಗಳು ಸಹ ಪ್ರಕಟಿಸಿವೆ.