ಕೋಲಾರ : ನಮ್ಮ ಸಮಾಜದಲ್ಲಿ ದೇವಸ್ಥಾನದಲ್ಲಿದೇವರು ಕಾಣದೆ ಇದ್ದರು, ಜನರು ಕೈ ಮುಗಿತಾರೆ. ಆದರೆ, ಹೆಣ್ಣನ್ನ ನೋಡುವ ದೃಷ್ಟಿಯೇ ಬೇರೆಯಿದೆ. ಅದು ಬದಲಾದಲ್ಲಿ ಮಾತ್ರ ಹೆಣ್ಣಿನ ರಕ್ಷಣೆ ಸಾಧ್ಯ ಎಂದು ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಉತ್ತರ ಪ್ರದೇಶ ಘಟನೆಯನ್ನ ಕಟುವಾಗಿ ಖಂಡಿಸಿದ್ದಾರೆ. ಇನ್ನು ಯುವತಿಯ ಮೇಲೆರೆಗಿ ಮೃಗಗಳಂತೆ ಕೆಲವರು ವರ್ತಿಸಿದರೆ, ಪೊಲೀಸ್ ಅಧಿಕಾರಿಗಳು ರಾತ್ರೋ ರಾತ್ರಿ ಸುಟ್ಟು ಹಾಕಿದ್ದಾರೆ, ಅಲ್ಲಿ ಯಾರೂ ಕೇಳುವವರು ಮಾಡುವವರು ಇಲ್ಲ, ಸ್ವಂತ ತಂದೆ ತಾಯಿಗೂ ತಿಳಿಸದೇ ಶವ ಸಂಸ್ಕಾರ ಮಾಡಿದ್ದು ಯಾಕೆ? ಸ್ವಾತಂತ್ರ ಯಾರಿಗೆ ಬಂದಿದೆ, ಯಾರದ್ದೋ ಅಸೂಯೆಗೆ ಅಲ್ಲಿ ಹೆಣ್ಣನ್ನ ಬಲಿಪಶು ಮಾಡಿದ್ದಾರೆ ಎಂದರು.
ಸಂತ್ರಸ್ತೆಯ ಮನೆಗೆ ಸಾಂತ್ವನ ಹೇಳಲು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರುಗಳು ತೆರಳಿದಾಗ ಪೊಲೀಸರು ಅಡ್ಡಿ ಪಡಿಸಿದ್ದಾರೆ, ಸ್ಥಳದಲ್ಲಿ ನಿಷೇದಾಜ್ಞೆಯನ್ನು ಜಾರಿ ಮಾಡಿದ್ದಾರೆ. ನಾವು ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಸಾಗುತ್ತಿಲ್ಲ, ಸಂವಿಧಾನದ ಆಶಯಗಳ ವಿರುದ್ದವೇ ಅಲ್ಲಿಯ ಸರ್ಕಾರ ವರ್ತಿಸುತ್ತಿದೆ ಎಂದು ಉತ್ತರ ಪ್ರದೇಶದ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅದಾದ ಬಳಿಕ ದೇಶದಲ್ಲಿ ಅತ್ಯಾಚಾರ ಪ್ರಕರಣಗಳೂ ಹೆಚ್ಚಾಗಿದ್ದವು. ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಆಗಿದ್ದರಿಂದ ಇನ್ನಾದರೂ ಕಾಮುಕರು ಇಂತಹ ಹೀನಕೃತ್ಯ ಮಾಡಲು ಹಿಂಜರಿಯಬಹುದು ಎಂದು ಊಹಿಸಲಾಗಿತ್ತು. ಆದರೆ, ದೆಹಲಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಹತ್ರಾಸ್ ಎಂಬ ಊರಿನ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿತ್ತು.
ಹೊಲದಲ್ಲಿ ಅತ್ಯಾಚಾರ ನಡೆಸಿ, ಗಂಭೀರವಾಗಿ ಗಾಯಗೊಳಿಸಲಾಗಿತ್ತು. ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಆಕೆಯ ಮರಣೋತ್ತರ ಪರೀಕ್ಷೆಯ ಬಳಿಕ ಮನೆಯವರನ್ನು ದೂರವಿಟ್ಟು ರಾತ್ರೋ ರಾತ್ರಿ ಉತ್ತರ ಪ್ರದೇಶದ ಪೊಲೀಸರೇ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ