ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಘಟ್ಟ ಪ್ರದೇಶ, ಚಿಕ್ಕಮಗಳೂರು ಭಾಗಳಿಂದ ಹರಿದು ಬರುತ್ತಿರುವ ನೀರಿನಿಂದಾಗಿ ಚಾರ್ಮಾಡಿಯ ತಪ್ಪಲಿನ ಗ್ರಾಮಗಳಲ್ಲಿ ನೆರೆ ಭೀತಿ ಆವರಿಸಿದೆ.
ಚಾರ್ಮಾಡಿಯ ಅಂತರ, ಕೊಳಂಬೆ, ಅರಣೆಪಾದೆ, ಪರ್ಲಾಣಿ, ಹೊಸಮನೆ, ಕುಕ್ಕಾವು, ಕಕ್ಕೆನಾಜೆಯಲ್ಲಿ ಮೃತ್ಯುಂಜಯ ಹೊಳೆ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸೇತುವೆಗಳು ಮತ್ತು ಕಿಂಡಿ ಅಣೆಕಟ್ಟುಗಳಲ್ಲಿ ಬೃಹತ್ ಮರದ ದಿಮ್ಮಿಗಳು, ಕಸ ಬಂದು ಸಿಲುಕುತ್ತಿದೆ. ಇದರಿಂದಾಗಿ ಸೇತುವೆಯ ಅಂಚಿನ ಮಣ್ಣು ರಸ್ತೆ ಸಮೇತ ಕೊಚ್ಚಿಕೊಂಡು ಹೋಗಿದೆ. ಕೆಲವೆಡೆ ಸೇತುವೆ ಸಂಪರ್ಕ ಕಳೆದುಕೊಂಡಿದ್ದು, ತೋಟಗಳಲ್ಲಿ ನೀರು ಹರಿಯುತ್ತಿದೆ.
ಕೊಳಂಬೆ ಸಮೀಪ ಮನೆಯೊಂದು ಮುಳುಗಡೆಯಾಗಿದೆ.ಅಂತರ ಅರಣೆಪಾದೆ ಬಳಿ ತಡೆಗೋಡೆ ಬಿರುಕು ಬಿಟ್ಟಿದ್ದು, ಕಿರು ಸೇತುವೆ ಇಕ್ಕೆಲಗಳ ಮಣ್ಣು ಕೊಚ್ಚಿ ಹೋಗಿ ಸುಮಾರು 100 ಮನೆಗಳ ಸಂಪರ್ಕ ಕಡಿತಗೊಂಡಿದೆ. ಈ ಪ್ರದೇಶಕ್ಕೆ ಸಂಚರಿಸಬೇಕಾದರೆ ಪರ್ಲಾಣಿ ಪ್ರದೇಶವಾಗಿ ಏಳು ಕಿ.ಮೀ. ಸುತ್ತು ಬಳಸಿ ಹೋಗಬೇಕಾಗಿದೆ. ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ ಮರಮಟ್ಟುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ. ತಹಸೀಲ್ದಾರ್ ಮಹೇಶ್ ಜಿ, ಅಧಿಕಾರಿಗಳ ತಂಡ ಮತ್ತು ಶ್ರೀ ಧ.ಗ್ರಾ ಯೋಜನೆಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಹಕರಿಸುತ್ತಿದ್ದಾರೆ.