Breaking News

ಅರಭಾವಿ ಶಾಸಕರ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹಕ್ಕೆ ಭೇಟಿ ನೀಡಿ ಸತ್ಕಾರ ಸ್ವೀಕರಿಸಿದ ನೂತನ ರಾಜ್ಯಸಭಾ ಸದಸ್ಯ

Spread the love

 

ಗೋಕಾಕ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊಂಡಿಯಾಗಿ ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ರವಿವಾರದಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹಕ್ಕೆ ಭೇಟಿ ನೀಡಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.

ಮೂರು ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿರುವುದನ್ನು ಗುರುತಿಸಿ ಪಕ್ಷ ರಾಜ್ಯಸಭಾ ಸದಸ್ಯನಂತಹ ಮಹತ್ತರ ಜವಾಬ್ದಾರಿ ನೀಡಿದೆ. ಪ್ರಬಲ ಅಭ್ಯರ್ಥಿಗಳನ್ನು ಬದಿಗಿಟ್ಟು ಸಾಮಾನ್ಯ ಕಾರ್ಯಕರ್ತನಿಗೆ ಇಂತಹ ದೊಡ್ಡ ಜವಾಬ್ದಾರಿ ನೀಡಿರುವುದು ಇಡೀ ಪಕ್ಷದ ಕಾರ್ಯಕರ್ತರಿಗೆ ಅಪಾರ ಸಂತಸವನ್ನುಂಟು ಮಾಡಿದೆ. ಕೇಂದ್ರ ಹಾಗೂ ರಾಜ್ಯ ಮಟ್ಟದ ನಾಯಕರಿಗೆ ನಾನು ಆಭಾರಿಯಾಗಿದ್ದೇನೆ. ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಚ್ಯುತಿ ತರದೇ ಕರ್ತವ್ಯ ನಿರ್ವಹಿಸುವುದಾಗಿ ಅವರು ಹೇಳಿದರು.

ಜಿಲ್ಲೆಯ ಎಲ್ಲ ಶಾಸಕರುಗಳು ಹಾಗೂ ಪಕ್ಷದ ಮುಖಂಡರು ನನಗೆ ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ಇಡೀ ರಾಜ್ಯದ ಬಿಜೆಪಿ ಕಾರ್ಯಕರ್ತರೆಲ್ಲರೂ ಕೂಡ ನನ್ನ ಆಯ್ಕೆಯನ್ನು ಸ್ವಾಗತಿಸಿದ್ದಾರೆ. ಅದರಲ್ಲೂ ಬೆಳಗಾವಿ ಜಿಲ್ಲೆಗೆ ರಾಜ್ಯಸಭೆ ಸ್ಥಾನ ಉಳಿಸಿಕೊಂಡಿರುವುದು ಕಾರ್ಯಕರ್ತರಿಗೆ ಹೆಮ್ಮೆಯಾಗಿದೆ. ಕೇಂದ್ರ ಸಚಿವ ಸುರೇಶ ಅಂಗಡಿ, ಡಿಸಿಎಂ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಉಪಸಭಾಪತಿ ಆನಂದ ಮಾಮನಿ, ಸಚಿವರಾದ ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ, ಕತ್ತಿ ಸಹೋದರರು, ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸೇರಿದಂತೆ ಜಿಲ್ಲೆಯ ಎಲ್ಲ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿಯನ್ನು ಕೂಡ ಮಾಡಿಕೊಂಡಿದ್ದೇವು. ಆದರೆ ಬದಲಾದ ರಾಜಕೀಯ ಸ್ಥಿತಿಯಲ್ಲಿ ಮನೆಯಲ್ಲಿ ಕುಳಿತುಕೊಂಡಿದ್ದ ನನಗೆ ಒಮ್ಮೆಲೆ ರಾಜ್ಯಸಭೆ ಟಿಕೇಟ್ ನೀಡಿರುವುದು ಆಶ್ಚರ್ಯವಾಯಿತು. ಹೀಗಾಗಿ ಬಯಸದೇ ಬಂದ ಭಾಗ್ಯ ನನ್ನದಾಯಿತು. ವಿಶ್ವದಲ್ಲಿಯೇ ಅತೀ ದೊಡ್ಡ ಪಕ್ಷವಾಗಿರುವ ಬಿಜೆಪಿಯಲ್ಲಿ ಎಲ್ಲರೂ ಒಂದೇ. ಮೇಲು-ಕೀಳು, ಮೂಲ-ವಲಸಿಗ ಎಂಬ ಬೇಧ-ಭಾವ ಮಾಡದೇ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಪಕ್ಷ ನೀಡುತ್ತಿರುವ ಸಲಹೆ ಸೂಚನೆಗಳನ್ನು ಪಾಲಿಸಿ ಪಕ್ಷವನ್ನು ಬಲವರ್ಧನೆಗೊಳಿಸೋಣ ಎಂದು ಹೇಳಿದರು.

ರಾಜ್ಯಸಭೆ ಸದಸ್ಯರಾಗಿ ಪ್ರಥಮ ಬಾರಿಗೆ ಶಾಸಕರ ಗೃಹ ಕಛೇರಿಗೆ ಆಗಮಿಸಿದ ಈರಣ್ಣ ಕಡಾಡಿ ಅವರನ್ನು ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶಾಸಕರ ಪರವಾಗಿ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮತ್ತು ಸಿಬ್ಬಂದಿಯವರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಮುಖಂಡರಾದ ಡಾ.ರಾಜೇಂದ್ರ ಸಣ್ಣಕ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಹನಮಂತ ತೇರದಾಳ, ಮುತ್ತೆಪ್ಪ ಕುಳ್ಳೂರ, ರವಿ ಪರುಶೆಟ್ಟಿ, ಹೆಚ್.ಡಿ. ಮುಲ್ಲಾ, ಬಿಜೆಪಿ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಈರಣ್ಣ ಕಡಾಡಿ ಅವರಿಗೆ ಅಭಿನಂದನೆಗಳು. ಕಡಾಡಿ ಅವರ ಆಯ್ಕೆಯಿಂದ ಬೆಳಗಾವಿ ಜಿಲ್ಲೆಗೆ ಅಭಿವೃದ್ಧಿ ದೃಷ್ಟಿಯಿಂದ ಅನುಕೂಲವಾಗಲಿದೆ. ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನ ತರಲು ಕಡಾಡಿಯವರು ಪ್ರಯತ್ನಿಸಲಿ. ಗೋಕಾಕ-ಮೂಡಲಗಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚಿನ ನೆರವು ಒದಗಿಸುವ ಪ್ರಯತ್ನ ಮಾಡಲಿ.
ಬಾಲಚಂದ್ರ ಜಾರಕಿಹೊಳಿ, ಕಹಾಮ ಅಧ್ಯಕ್ಷ ಹಾಗೂ ಶಾಸಕ.


Spread the love

About Laxminews 24x7

Check Also

ರಾಯಬಾಗ ಪೊಲೀಸರಿಂದ 7.82ಲಕ್ಷ ಮೊತ್ತದ ಗಾಂಜಾ ವಶ ಆರೋಪಿಗಳ ಬಂಧನ

Spread the loveರಾಯಬಾಗ ಪೊಲೀಸರಿಂದ 7.82ಲಕ್ಷ ಮೊತ್ತದ ಗಾಂಜಾ ವಶ ಆರೋಪಿಗಳ ಬಂಧನ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ