ಬೆಂಗಳೂರು, ಜು. 26: ಬಿ.ಎಸ್. ಯಡಿಯೂರಪ್ಪ ಸಿಟ್ಟು ಕ್ಷಣಿಕ, ಪಟ್ಟು ಹಿಡಿದು ಕೂತರೆ ಮುಗಿಸುವ ತನಕ ಬಿಡದ ಛಲಗಾರ. ಬಿ.ಎಸ್. ಯಡಿಯೂರಪ್ಪ ಅವರ ಕಣ್ಣೀರು ಸುನಾಮಿಯನ್ನೇ ಸೃಷ್ಟಿ ಮಾಡುತ್ತದೆ! ರಾಜೀನಾಮೆ ಕೊಡುವ ಮುನ್ನ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಕಣ್ಣೀರಿನ ಅರೆ ಗಂಟಲಿನ ಧ್ವನಿಯಲ್ಲಿ ಹೊಗಳಿದ್ದಾರೆ. ಆನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದ್ದಾರೆ. ಆದರೆ, ಬಿಎಸ್ ವೈ ಅವರ ಕಣ್ಣೀರಿನ ವಿದಾಯ ಬಿಜೆಪಿಯ ಪಾಲಿಗೆ ದೊಡ್ಡ ಪೆಟ್ಟು ಕೊಡಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.
ಯಡಿಯೂರಪ್ಪ ಕಣ್ಣೀರಿನ ಮರ್ಮ ಏನು?: ರಾಜಕೀಯ ಮೇಲಾಟಗಳ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಕಣ್ಣಾಲಿಗಳಲ್ಲಿ ನೀರು ತುಂಬಿ ಕೊಂಡಿದ್ದರು. ಅವರ ಅರೆ ಧ್ವನಿಯಲ್ಲಿ ಕೇಂದ್ರ ನಾಯಕರನ್ನು ಹೊಗಳಿದರು. ಎಪ್ಪತ್ತು ಐದು ವರ್ಷ ವಯಸ್ಸು ಮುಗಿದರೂ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶ ನೀಡಿದ್ದಕ್ಕೆ ಧನ್ಯವಾದವನ್ನು ಅರ್ಪಿಸಿದ್ದಾರೆ. ಆದರೆ, ಅವರ ಕಣ್ಣೀರು ವಿದಾಯದ ಮಾತುಗಳು ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಲಿಂಗಾಯುತ ಸಮುದಾಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ.
ಯಡಿಯೂರಪ್ಪ ಕಣ್ಣೀರಿನ ಫಲಕ್ಕೆ ಸಿಕ್ಕ ಜಯ
ಯಡಿಯೂರಪ್ಪ ಎದುರಾಳಿ ಪಕ್ಷಗಳಿಗಿಂತಲೂ ತನ್ನ ಮಾತೃ ಪಕ್ಷದಿಂದ ನೋವುಂಡಿದ್ದೇ ಜಾಸ್ತಿ. ಜನತಾದಳ ಹಾಗೂ ಬಿಜೆಪಿಯನ್ನು ಒಗ್ಗೂಡಿಸಿ ರಚಿಸಿದ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅಧಿಕಾರ ಅನುಭವಿಸಿದರು. ಮುಖ್ಯಮಂತ್ರಿ ಸ್ಥಾನ ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಿದ ಐದೇ ದಿನಕ್ಕೆ ಬೆಂಬಲ ವಾಪಸು ಪಡೆದಿದ್ದರು. ಅವತ್ತು ಕೂಡ ಯಡಿಯೂರಪ್ಪ ಕಣ್ಣೀರು ಹಾಕಿದ್ದರು. ಆ ಕಣ್ಣೀರಿನ ಪ್ರತಿಫಲವೇ 2008 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಜೆಡಿಎಸ್ ಬೆನ್ನಿಗೆ ಚೂರಿ ಹಾಕಿದ ಬೆನ್ನಲ್ಲೇ ಚುನಾವಣೆ ಎದರಿಸಿದ ಯಡಿಯೂರಪ್ಪ ಪಕ್ಷವನ್ನು ಅಧಿಕಾರಕ್ಕೆ ತಂದರು. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಹಿರಿಮೆಗೆ ಪಾತ್ರವಾದರು. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನಕ್ಕೆ ಕರೆ ತಂದು ಕೂರಿಸಿದ್ದೇ ಜೆಡಿಎಸ್ ವಚನ ಭ್ರಷ್ಟತನ ವಿರುದ್ಧ ಸುರಿಸಿದ್ದ ಕಣ್ಣೀರು. ಆ ಕಣ್ಣೀರಿನಿಂದ ಯಡಿಯೂರಪ್ಪನವರಲ್ಲಿ ಹುಟ್ಟಿದ ಛಲ.
ಯಡಿಯೂರಪ್ಪ ಇಲ್ಲದ ಬಿಜೆಪಿ ಊಹೆಗೆ ನಿಲುಕದ್ದು: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಎಂ ಆಗಿ ಆಡಳಿತ ನಡೆಸುತ್ತಿದ್ದ ಯಡಿಯೂರಪ್ಪ ಅವರು ಜೈಲಿಗೆ ಹೋದರು. ಈ ವೇಳೆ ತಾನು ಸೂಚಿಸಿದ ಜಗದೀಶ್ ಶೆಟ್ಟರ್ ಅವರನ್ನೇ ಮುಖ್ಯಮಂತ್ರಿ ಮಾಡಿದರು. ಯಾವಾಗ ಯಡಿಯೂರಪ್ಪನ ಭಾವನೆಗಳಿಗೆ ಚೂರಿ ಇರಿತ ಆಯಿತೋ ಜಗದೀಶ್ ಶೆಟ್ಟರ್ ಅವರನ್ನು ಕೆಳಗೆ ಇಳಿಸಿದರು. ಅದಾದ ಬಳಿಕ ಸದಾನಂದಗೌಡರನ್ನು ಸಿಎಂ ಮಾಡಿದರು. ಯಾವಾಗ ಎದುರಾಳಿ ಪಕ್ಷಗಳಿಗಿಂತಲೂ ಸ್ವಂತ ಪಕ್ಷದಿಂದ ಬೆನ್ನಿಗೆ ಚೂರಿ ಹಾಕುವ ಪ್ರಯತ್ನ ಆಯಿತು. ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ಮೂಲೆಗುಂಪು ಮಾಡುವ ಪ್ರಯತ್ನಗಳು ನಡೆದವು. ಅವಾಗಲೂ ಸಹ ಯಡಿಯೂರಪ್ಪ ಬಿಜೆಪಿ ಕಟ್ಟಿದ ನೋವನ್ನು ನೆನಪಿಸಿಕೊಂಡು ಪಕ್ಷಕ್ಕೆ ವಿದಾಯ ಹೇಳಿದ್ದರು. ಆನಂತರ ಕೆಜೆಪಿ ಪಕ್ಷವನ್ನು ಹುಟ್ಟು ಹಾಕಿ ಬಿಜೆಪಿ ಸಂಪೂರ್ಣ ನೆಲ ಕಚ್ಚುವಂತೆ ಮಾಡಿದ್ದರು. ಯಡಿಯೂರಪ್ಪನ ಕಣ್ಣೀರಿನ ವಿದಾಯದ ಪರಿಣಾಮ ಬಿಜೆಪಿಗೆ ದೊಡ್ಡ ಪೆಟ್ಟು ನೀಡಿತ್ತು. ಇದರ ಲಾಭ ಪಡೆದಿದ್ದು ಕಾಂಗ್ರೆಸ್ ಪಕ್ಷ. ನಿಷ್ಠುರ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾದರು. ಒಂದು ವೇಳೆ ಯಡಿಯೂರಪ್ಪ ಮರಳಿ ಬಿಜೆಪಿ ಹೊಸ್ತಿಲು ತುಳಿಯದೇ ಇದ್ದ ಪಕ್ಷದಲ್ಲಿ ಬಿಜೆಪಿ ಈ ಪರಿಯ ಗೆಲುವು ಸಾಧಿಸಲು ಸಾಧ್ಯವೇ ಇರಲಿಲ್ಲ ಎಂದೇ ಹೇಳಲಾಗುತ್ತದೆ. ಜೈಲಿಗೆ ಹೋಗಿ ಮತ್ತೆ ಬಿಜೆಪಿಯಲ್ಲಿ ಪ್ರಭಾವಿ ನಾಯಕನಾಗಿ ಬೆಳೆದಿದ್ದು ಮಾತ್ರ ಯಡಿಯೂರಪ್ಪ ಅಲ್ಲವೇ ?
![](https://assets-news-bcdn.dailyhunt.in/cmd/resize/400x400_80/fetchdata16/images/7d/4e/0f/7d4e0f47d48b8e676674771819f0883dd372e0d2f794e5114a9e4521632ce27a.jpg)
ಅಧಿಕಾರಕ್ಕೆ ತಂದ ಯಡಿಯೂರಪ್ಪ
ಆಡಳಿತ ನಡೆಸೋಕೆ ಅಸಮರ್ಥನೇ ? : ಇನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಕುಸಿದು ಬಿದ್ದಿದ್ದೇ ಯಡಿಯೂರಪ್ಪ ಮತ್ತೆ ಸಿಎಂ ಆಗಲು ಮುಂದಾದರು. ಕೆಟ್ಟದ್ದೋ, ಸರಿಯೋ, ನೈತಿಕವೋ ಅನೈತಿಕವೇ ಆಪರೇಷನ್ ಹಸ್ತವನ್ನು ಮಾಡಿ ಮತ್ತೆ ಬಿಜೆಪಿ ರಾಜ್ಯವನ್ನಾಳುವ ಅವಕಾಶವನ್ನಂತೂ ಸೃಷ್ಟಿ ಮಾಡಿದ್ದು ಯಡಿಯೂರಪ್ಪಾವರೇ. 2018 ರಲ್ಲಿ ಮೈತ್ರಿ ಸರ್ಕಾರ ಪತನದ ಬಳಿಕ ಯಡಿಯೂರಪ್ಪ ಸಿಎಂ ಆದರು. ಬೇರೊಂದು ಪಕ್ಷಕ್ಕೆ ದ್ರೋಹ ಬಗೆದವರನ್ನು ಬಗಲಲ್ಲಿ ಇಟ್ಟುಕೊಂಡೇ ಎರಡು ವರ್ಷ ಅಧಿಕಾರ ಪೂರೈಸಿದರು. ಈ ಅವಧಿ ಪೂರ್ಣ ಗೊಳಿಸಿ ನಿವೃತ್ತಿಯಾಗಿದ್ದಲ್ಲಿ ಬಹುಶಃ ಯಡಿಯೂರಪ್ಪ ಬಿಜೆಪಿಯನ್ನು ಎದೆಯಲ್ಲಿ ಟ್ಟುಕೊಂಡು ಮತ್ತೆ ತಂತ್ರಗಾರಿಕೆ ಮಾಡುತ್ತಿದ್ದರೋ ಏನೋ ಗೊತ್ತಿಲ್ಲ. ರಾಜ್ಯದ ಏಳು ನೂರು ಮಠಾಧೀಶರ ವಿರೋಧ, ಬೆಂಬಲಿಗರ ಅಸಮಧಾನ ನಡುವೆ ಕೇಂದ್ರ ವರಿಷ್ಠರು ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ. ಸಿಎಂ ಹುದ್ದೆಗೆ ರಾಜೀನಾಮೆ ನೀಡುವಾಗ ಮತ್ತೆ ಯಡಿಯೂರಪ್ಪ ಕಣ್ಣೀರಿನ ಅರೆ ಧ್ವನಿಯಲ್ಲಿ ಕೇಂದ್ರ ವರಿಷ್ಠರನ್ನು ಹೊಗಳಿದ್ದಾರೆ.
![](https://assets-news-bcdn.dailyhunt.in/cmd/resize/400x400_80/fetchdata16/images/2c/a2/4e/2ca24e2619f79b7bf0f3b37e26015982f4ee1194136f26c29e6c6ab4000d900b.jpg)
ಒಲ್ಲದ ಮನಸಿನಿಂದ ಯಡಿಯೂರಪ್ಪ ಕಣ್ಣೀರಿನ ವಿದಾಯ ಹೇಳಿರುವುದು ಬಿಜೆಪಿ ಪಾಲಿಗೆ ಕಷ್ಟ ಎದುರಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಯಡಿಯೂರಪ್ಪ ಬೇಕು, ಅದೇ ಆಡಳಿತ ನಡೆಸಲು ಅನರ್ಹನೇ ಎಂಬ ಪ್ರಶ್ನೆ ಮೂಡದೇ ಇರುವುದು. ಯಡಿಯೂರಪ್ಪ ಅವರ ದೇಹಕ್ಕೆ ವಯಸ್ಸಾಗಿರಬುದು, ಆಲೋಚನೆ, ರಾಜಕೀಯ ತಂತ್ರಗಾರಿಕೆಗೆ ಅಲ್ಲವಲ್ಲಾ ? ಬಿಜೆಪಿ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡವರು ರಾಜ್ಯವನ್ನಾಳುವ ಕ್ಷಾಣಾಕ್ಷತೆ ಮಾತ್ರವಲ್ಲ, ಯಡಿಯೂರಪ್ಪ ಬಳಿ ಹೇಗೆ ಇರುತ್ತಾರೆ ಅನ್ನುವುದು ಮುಖ್ಯವಾಗುತ್ತದೆ. ಇದು ಮುಂದಿನ ಸಿಎಂ ಮುಂದೆ ಇರುವ ದುಡ್ಡ ಸವಾಲು. ಸ್ವಲ್ಪ ಲಯ ತಪ್ಪಿದರೂ ಪಕ್ಷಕ್ಕೆ ಸರಿಪಡಿಸಲಾಗದ ಹಾನಿ ಆಗುತ್ತದೆ ಎಂಬುದಲ್ಲಿ ಎರಡು ಮಾತಿಲ್ಲ ಎಂಬುದು ಬಿಜೆಪಿ ಪಾಳಯದಲ್ಲಿಯೇ ಚರ್ಚೆ ಆಗುತ್ತಿರುವ ಮಾತುಗಳು.