ಬೆಂಗಳೂರು: ಕರ್ತವ್ಯ ನಿರತರಾಗಿದ್ದ ವೇಳೆ ಕೆಲ ಹೊಯ್ಸಳ ಪೊಲೀಸರು ಸುಖಾಸುಮ್ಮನೆ ವಾಹನ ನಿಲ್ಲಿಸಿಕೊಂಡು ಕಾಲಹರಣ ಮಾಡುತ್ತಿರುವ ಆರೋಪಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹೊಯ್ಸಳ ಪೊಲೀಸರ ಕಾರ್ಯವೈಖರಿಗೆ ಚುರುಕು ಮುಟ್ಟಿಸುವ ಸಲುವಾಗಿ, ಒಂದಷ್ಟು ಬದಲಾವಣೆ ತರಲು ಪೊಲೀಸ್ ಇಲಾಖೆ ಮುಂದಾಗಿದೆ.
ಈ ಮೊದಲು ಅಯಾಯ ಪೊಲೀಸ್ ಠಾಣೆಯಿಂದಲೇ ಹೊಯ್ಸಳ ಬೀಟ್ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿತ್ತು. ಸದ್ಯ ಕಮಿಷನರ್ ಕಚೇರಿಯ ಕಮಾಂಡೆಂಟ್ ಸೆಂಟರ್ ನಿಂದ ಹೊಯ್ಸಳ ಪೊಲೀಸರ ಕೆಲಸದ ಬಗ್ಗೆ ನಿಗಾ ಇಡಲಾಗುತ್ತಿದೆ. ಜಿಪಿಎಸ್ ಮೂಲಕ ಬೀಟ್ ನಲ್ಲಿರುವ ಯಾವ ಹೊಯ್ಸಳ ವಾಹನ, ಚೀತಾ ಬೈಕ್ ಎಲ್ಲಿದೆ ಅನ್ನೋದನ್ನು ತಿಳಿಯಲಾಗುತ್ತಿತ್ತು.
ಇಲ್ಲೂ ಕೂಡ ಕೆಲ ಪೊಲೀಸರು, ಸುಖಾಸುಮ್ಮನೆ ವಾಹನ ನಿಲ್ಲಿಸಿಕೊಂಡು ಕಾಲಹರಣ ಮಾಡ್ತಿದ್ದಾರೆ. ಸರಿಯಾಗಿ ಬೀಟ್ ಮಾಡ್ತಿಲ್ಲ. ಹಾಗಾಗಿ ಅಪರಾಧ ಚಟುವಟಿಕೆಗಳು ಹೆಚ್ಚಾಗ್ತಿವೆ ಅನ್ನೋ ಆರೋಪಗಳು ಕೇಳಿಬಂದಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಹೊಯ್ಸಳ ಮತ್ತು ಚೀತಾ ವಾಹನಗಳ ಕಾರ್ಯಕ್ಷಮತೆ ಹೆಚ್ಚಿಸಿರುವ ನಿಟ್ಟಿನಲ್ಲಿ ಕಮಾಂಡೆಂಟ್ ಸೆಂಟರ್ ನಿಂದ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು, ಹತ್ತು ನಿಮಿಷಕ್ಕಿಂತ ಒಂದು ಜಾಗದಲ್ಲಿ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಕರ್ತವ್ಯದಲ್ಲಿದ್ದ ವೇಳೆ ಅಪರಾಧ ಚಟುವಟಿಕೆಗಳು ನಡೆದರೆ, ಆ ಭಾಗದಲ್ಲಿ ಬೀಟ್ ನಲ್ಲಿರುವ ಪೊಲೀಸರನ್ನೇ ಹೊಣೆ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.