Breaking News

ಖಾನಾಪುರದ ಕೆಎಸ್​ಆರ್​ಪಿ ಮೈದಾನಕ್ಕೂ ನೀರು; ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಸುತ್ತ ಜಲಾವೃತ

Spread the love

ಬೆಳಗಾವಿ: ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಖಾನಾಪುರ ಪಟ್ಟಣಕ್ಕೆ ಮಲಪ್ರಭಾ ನದಿ ನೀರು (Heavy Rain) ನುಗ್ಗುತ್ತಿದೆ. ಇದರಿಂದಾಗಿ ಖಾನಾಪುರ ಪಟ್ಟಣದ ಹೊರವಲಯದ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ನಿರಂತರ ಮಳೆಯಿಂದ ಖಾನಾಪುರ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಖಾನಾಪುರ ಪಟ್ಟಣದ ಹೊರವಲಯದ ಮೀನಿನ ಮಾರುಕಟ್ಟೆಗೆ ನೀರು ನುಗ್ಗಿದೆ. ಅಲ್ಲದೆ ಪಟ್ಟಣದ ಕೆಎಸ್‌ಆರ್‌ಪಿ ತರಬೇತಿ ಕೇಂದ್ರದ ಮೈದಾನಕ್ಕೆ ನೀರು ನುಗ್ಗಿದ್ದು, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಎದುರಿನ ಪ್ರದೇಶ ಜಲಾವೃತವಾಗಿದೆ.

ಕುಂದಾನಗರಿ ಬೆಳಗಾವಿಯಲ್ಲಿ ಮಳೆರಾಯನ ಆರ್ಭಟ
ನಿರಂತರ ಸುರಿಯುತ್ತಿರುವ ಮಳೆಗೆ ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿದ್ದು, ಬಳ್ಳಾರಿ ನಾಲಾ ನೀರು ನುಗ್ಗಿ ಬೆಳಗಾವಿ ಧಾಮನೆ ರಸ್ತೆ ಜಲಾವೃತವಾಗಿದೆ. ಹೀಗಾಗಿ ಬೆಳಗಾವಿ – ಧಾಮನೆ ಮಾರ್ಗ ಮಧ್ಯದ ರಸ್ತೆ ಸಂಪರ್ಕ ಕಡಿತವಾಗಿದೆ. ಅಲ್ಲದೆ, ಧಾಮನೆ ರಸ್ತೆಯ ಅಕ್ಕಪಕ್ಕದ ನೂರಾರು ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ.

ನಂದಗಡ ಡ್ಯಾಂಗೆ ಹರಿದು ಬರುತ್ತಿರುವ ನೀರು
ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ದುರ್ಗಾಡಿ ಬೆಟ್ಟ ಪ್ರದೇಶದಿಂದ ಧಾರಾಕಾರವಾಗಿ ಮಳೆ ನೀರು ಹರಿದು ಬರುತ್ತಿದೆ. ‌ಪರಿಣಾಮವಾಗಿ ನಂದಗಡ ಡ್ಯಾಂಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದ್ದು, ನಂದಗಡ ಗ್ರಾಮದ ಹೊರವಲಯದಲ್ಲಿ ಕೃಷಿ ಜಮೀನು ಜಲಾವೃತವಾಗಿದೆ. ಅಲ್ಲದೆ ಖಾನಾಪುರ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಕೃಷ್ಣಾ ನದಿ ಪಕ್ಕದ ಗ್ರಾಮಗಳನ್ನು ಖಾಲಿ ಮಾಡಿಸುತ್ತಿರುವ ತಹಶಿಲ್ದಾರ್​
ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ, ಕೃಷ್ಣಾ ನದಿ ತಟದಲ್ಲಿ ಪ್ರವಾಹದ ಭೀತಿ‌ ಎದುರಾಗಿದೆ. ಹೀಗಾಗಿ ಚಿಕ್ಕೋಡಿ ತಾಲೂಕಿನ ಇಂಗಳಿ, ಯಡೂರ ವಾಡಿ, ಚಂದೂರ ಗ್ರಾಮಗಳಿಗೆ ತಹಶಿಲ್ದಾರ್​ ಪ್ರವೀಣ್ ಜೈನ್ ಭೇಟಿ ನೀಡಿದ್ದು, ಸಂಜೆ ವೇಳೆಗೆ ಎರಡು ಕಾಳಜಿ ಕೇಂದ್ರ ತೆರಯಲಾಗುವುದು ಎಂದು ಸೂಚಿಸಿದ್ದಾರೆ. ಅಲ್ಲದೆ ಗ್ರಾಮಸ್ಥರ ಮನವೊಲಿಸಿದ್ದು, ಸುರಕ್ಷಿತ ಸ್ಥಳಗಳತ್ತ ತೆರಳಲು ಸೂಚನೆ ನೀಡಿದ್ದಾರೆ.

ಚಂದೂರ ಗ್ರಾಮಗಳಿಗೆ ತಹಶಿಲ್ದಾರ್​ ಪ್ರವೀಣ್ ಜೈನ್ ಭೇಟಿ

ಮಾಚಕನೂರು ಹೊಳೆಬಸವೇಶ್ವರ ದೇವಸ್ಥಾನ ಜಲಾವೃತ
ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಘಟಪ್ರಭಾ ನೀರಿನ ಹರಿವು ಹಂತವಾಗಿ ಹೆಚ್ಚಳವಾಗುತ್ತಿದೆ. ಇದರ ಪರಿಣಾಮ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಾಚಕನೂರು ಹೊಳೆಬಸವೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ.

ಚೋರ್ಲಾ ಘಾಟ್​ನಲ್ಲಿ ಭೂಕುಸಿತ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ‌ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚೋರ್ಲಾ ಘಾಟ್​ನಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತ ಹಿನ್ನೆಲೆ ಗೋವಾ-ಬೆಳಗಾವಿ ಮಧ್ಯೆ ಸಂಪರ್ಕ ಕಡಿತವಾಗಿದ್ದು, ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ.

ಚೋರ್ಲಾ ಘಾಟ್​ನಲ್ಲಿ ಭೂಕುಸಿತ

ಕೃಷ್ಣಾ ನದಿಗೆ ನೀರು ಬಿಡುಗಡೆ
ಮಹಾರಾಷ್ಟ್ರದಲ್ಲಿ ಭಾರಿ‌ ಮಳೆಯಾಗಿರುವ ಹಿನ್ನಲೆಯಲ್ಲಿ, ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿರುವ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಎಂಟು ಗಂಟೆಗೆ 10ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು,10ಗಂಟೆ 25ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇನ್ನು ಮಧ್ಯಾಹ್ನ ಎರಡು ಗಂಟೆಗೆ 50ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುವುದು. ಸದ್ಯ ಕೃಷ್ಣಾ ನದಿಯಲ್ಲಿ 1.34 ಲಕ್ಷ ಕ್ಯೂಸೆಕ್ ನೀರಿನ ಹರಿವು ಇದೆ. ಇಂದು ರಾತ್ರಿ ವೇಳೆಗೆ ಕೃಷ್ಣಾ ನದಿಯಲ್ಲಿ ಎರಡು ಲಕ್ಷ ಕ್ಯೂಸೆಕ್ ಹರಿವು ಇರಲಿದೆ.
ಹೀಗಾಗಿ ನದಿಪಾತ್ರದಲ್ಲಿರುವ ಜನರಿಗೆ ಸ್ಥಳಾಂತರ ಮಾಡುವಂತ ಕೆಲಸ ಮುಂದುವರೆದಿದೆ. ಈಗಾಗಲೇ ಒಂದು ಎನ್‌ಡಿಆರ್‌ಎಪ್ ತಂಡ ಬಂದಿದ್ದು, ಅಪಾಯವಿರುವ ಸ್ಥಳಗಳಿಗೆ ಇನ್ನೊಂದು ತಂಡವನ್ನು ನಿಯೋಜನೆ ಮಾಡಲಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ