ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಶ್ರುತಿ ಅವರ ನೇಮಕವನ್ನು ಸರ್ಕಾರ ಹಿಂಪಡೆದಿದೆ. ಅಚ್ಚರಿ ರೀತಿಯಲ್ಲಿ ಆ ಸ್ಥಾನಕ್ಕೆ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಹೊರಬಿದ್ದಿದೆ.
ಈ ಬದಲಾವಣೆ ನಡೆದು 48 ತಾಸು ಕಳೆದರೂ ತೀರ್ಮಾನದ ವಿಷಯ ಶ್ರುತಿ ಅವರ ಗಮನಕ್ಕೆ ಬಂದಿಲ್ಲ. ಸರ್ಕಾರದ ಕಡೆಯಿಂದ ಅಥವಾ ಮುಖ್ಯಮಂತ್ರಿ ಕಚೇರಿಯಿಂದ ಶ್ರುತಿ ಅವರಿಗೆ ತಿಳಿಸುವ ಪ್ರಯತ್ನವನ್ನೂ ಮಾಡಿಲ್ಲ ಎನ್ನಲಾಗಿದೆ.ಶನಿವಾರ ಬೆಳಗ್ಗೆ ಆದೇಶ ಹೊರಟಿದ್ದು, ಭಾನುವಾರ ರಾತ್ರಿ ಮಾಧ್ಯಮದಿಂದಲೇ ಈ ವಿಷಯ ಶ್ರುತಿ ಅವರ ಗಮನಕ್ಕೆ ಬಂದಿದೆ. ವಿಷಯ ತಿಳಿದು ಅವರು ಸಹ ಆಶ್ಚರ್ಯಪಟ್ಟಿದ್ದಾರೆ.
ಅಂದಹಾಗೆ ಕಾಪು ಸಿದ್ದಲಿಂಗಸ್ವಾಮಿ 2013ರಲ್ಲಿ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದರು. ಅದಕ್ಕೂ ಮುನ್ನ ಸಿದ್ದಲಿಂಗಸ್ವಾಮಿ ಬಿ.ಎಸ್.ಯಡಿಯೂರಪ್ಪ ಮನೆಯಲ್ಲಿ ಸಹಾಯಕರಾಗಿದ್ದರು. ಅವರೀಗ ಏಕಾಏಕಿ ನಿಗಮ ಮಂಡಳಿಯಲ್ಲಿ ಸ್ಥಾನಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಶ್ರುತಿಯವರಿಗೆ ಪಕ್ಷದಲ್ಲಿ ಅಥವಾ ಸರ್ಕಾರದಲ್ಲಿ ಬೇರೆ ಜವಾಬ್ದಾರಿ ನೀಡುವ ಬಗ್ಗೆಯೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.