ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ಮೇಜರ್ ಸರ್ಜರಿಗೆ ಕಮಿಷನರ್ ಲಾಬೂರಾಮ್ ಮುಂದಾಗಿದ್ದಾರೆ.
ವಿವಿಧ ಠಾಣೆಗಳಲ್ಲಿ ಹತ್ತಾರು ವರ್ಷಗಳಿಂದ ಬೀಡು ಬಿಟ್ಟಿರುವ ಕಾನ್‌ಸ್ಟೆಬಲ್, ಹವಾಲ್ದಾರ್, ಎಎಸ್‌ಐ, ಎಸ್‌ಐಗಳ ವರ್ಗಾವಣೆಗೆ ನಿರ್ಧರಿಸಿರುವ ಕಮಿಷನರ್, ನಾಲ್ಕು ವರ್ಷ ಹಾಗೂ ಅದಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿರುವ ಎಲ್ಲ ಸಿಬ್ಬಂದಿಯ ಮಾಹಿತಿ ನೀಡುವಂತೆ ಎಸಿಪಿ ಹಾಗೂ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಿದ್ದಾರೆ.
ಅವಳಿ ನಗರದಲ್ಲಿ ನಾಲ್ಕು ಸಂಚಾರ ಪೊಲೀಸ್ ಠಾಣೆಗಳಿದ್ದು, ಅವುಗಳಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿ 10 ವರ್ಷಗಳಿಗಿಂತಲೂ ಹೆಚ್ಚು ಕಾಲ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿಂದಲೇ ವೃತ್ತಿ ಬದುಕು ಆರಂಭಿಸಿರುವ ಅವರು, ಹವಾಲ್ದಾರ್, ಎಎಸ್‌ಐ, ಎಸ್‌ಐ ಆಗಿ ಪದೋನ್ನತಿ ಹೊಂದಿದ್ದಾರೆ. ಕಮಿಷನರೇಟ್‌ನ 14 ಠಾಣೆಗಳಲ್ಲಿಯೂ ನಾಲ್ಕು ವರ್ಷಕ್ಕಿಂತ ಮೇಲ್ಟಟ್ಟವರಿದ್ದಾರೆ.
ಆರೋಪ: ಒಂದೇ ಠಾಣೆಯಲ್ಲಿ ಬಹಳ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸ್ಥಳೀಯವಾಗಿ ಹಿಡಿತ ಸಾಧಿಸಿದ್ದಾರೆ. ಕೆಲವು ಕಾನೂನುಬಾಹಿರ ಚಟುವಟಿಕೆಗಳಿಗೆ ಪರೋಕ್ಷವಾಗಿ ಬೆಂಬಲ ದೊರೆಯುತ್ತಿದೆ. ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿ ಹಾಗೂ ಅಧಿಕಾರಿಗಳ ಕರ್ತವ್ಯಲೋಪ ಇತ್ತೀಚೆಗೆ ಕಮಿಷನರ್ ಗಮನಕ್ಕೂ ಬಂದಿತ್ತು. ಅಲ್ಲದೆ, ಸಾರ್ವಜನಿಕರು ಹಾಗೂ ಕೆಲ ಜನಪ್ರತಿನಿಧಿಗಳು ಸಹ ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ದೂರು ಸಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಮಿಷನರ್ ಅಂತಹ ಸಿಬ್ಬಂದಿ ಮಾಹಿತಿ ಪಡೆದು ಆಂತರಿಕ ವರ್ಗಾವಣೆಗೆ ನಿರ್ಧರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಯಕಟ್ಟಿನ ಸ್ಥಳದಲ್ಲಿ ನಿಶ್ಚಿಂತೆಯಾಗಿ ಇಷ್ಟು ವರ್ಷ ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿ, ಅಧಿಕಾರಿಗಳಲ್ಲಿ ಕಮಿಷನರ್ ಅವರ ಈ ನಡೆ ಸಂಚಲನ ಮೂಡಿಸಿದೆ. ದಿನ ಬೆಳಗಾದರೆ ಕಂಪ್ಯೂಟರ್ ಆಪರೇಟಿಂಗ್, ಅಪರಾಧ ವಿಭಾಗ, ಕೋರ್ಟ್, ಬರಹಗಾರ, ವಾಹನ ತಪಾಸಣೆ ಎನ್ನುತ್ತಿದ್ದವರಿಗೆ, ಕಮಿಷನರ್ ಪತ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕಮಿಷನರ್ ಯಾವ ಠಾಣೆ, ಯಾವ ವಿಭಾಗಕ್ಕೆ ನಿಯೋಜನೆ ಮಾಡುತ್ತಾರೋ ಎನ್ನುವ ಆತಂಕ ಶುರುವಾಗಿದೆ. ಕೆಲವರು ಜನಪ್ರತಿನಿಧಿಗಳ ಮೊರೆ ಹೋಗಿದ್ದು, ವರ್ಗಾವಣೆ ಮಾಡದಿರುವಂತೆ ಕಮಿಷನರ್ ಮೇಲೆ ಒತ್ತಡ ಹಾಕುವಂತೆ ವಿನಂತಿಸುತ್ತಿದ್ದಾರೆ ಎಂಬ ಮಾತುಗಳು ಠಾಣೆ ಆವರಣದಲ್ಲಿ ಕೇಳಿ ಬರುತ್ತಿವೆ.
ಕಮಿಷನರ್ ಪತ್ರದಲ್ಲಿ ಏನಿದೆ?
2021ರ ಜೂನ್ 30ಕ್ಕೆ ನಾಲ್ಕು ವರ್ಷ ಪೂರೈಸಿದ ಹಾಗೂ ಅದಕ್ಕಿಂತ ಹೆಚ್ಚು ವರ್ಷ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯ ವೈಯಕ್ತಿಕ ಮಾಹಿತಿ ಪರಿಶೀಲಿಸಿ ನೀಡಬೇಕು. ಠಾಣೆಗೆ ಮಂಜೂರಾದ ಸಿಬ್ಬಂದಿ, ಸದ್ಯ ಇರುವ ಸಿಬ್ಬಂದಿ ಹಾಗೂ ಖಾಲಿ ಇರುವ ಹುದ್ದೆ ಸಂಖ್ಯೆ ಪ್ರತ್ಯೇಕವಾಗಿ ನಮೂದಿಸಬೇಕು. ತಪ್ಪು ಮಾಹಿತಿ ನೀಡಿದರೆ ಠಾಣಾಧಿಕಾರಿಯನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರವೇ ಮಾಹಿತಿ ನೀಡಬೇಕಾಗಿದ್ದರಿಂದ, ಈಗಾಗಲೇ ಎಲ್ಲಾ ಠಾಣೆಯ ಇನ್‌ಸ್ಪೆಕ್ಟರ್‌ಗಳು ಕಮಿಷನರ್‌ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಯಾವ್ಯಾವ ಠಾಣೆಗಳಲ್ಲಿ ಯಾವ್ಯಾವ ಸಿಬ್ಬಂದಿ ಎಷ್ಟೆಷ್ಟು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಮದು ಮಾಹಿತಿ ಪಡೆದು, ಆಂತರಿಕ ವರ್ಗಾವಣೆಗೆ ಪರಿಶೀಲಿಸಾಗುವುದು
ಲಾಬೂರಾಮ್, ಕಮಿಷನರ್,
ಹುಬ್ಬಳ್ಳಿ-ಧಾರವಾಡ ಮಹಾನಗರ
Laxmi News 24×7