ಕೊರೊನಾ ಹಿನ್ನೆಲೆಯಲ್ಲಿ ಭೌತಿಕ ತರಗತಿ ಆರಂಭ ವಿಳಂಬವಾಗುತ್ತಿರುವುದರಿಂದ ಪ್ರಸಕ್ತ ಸಾಲಿಗೂ ಶೇ.30ರಷ್ಟು ಪಠ್ಯ ಕಡಿತಕ್ಕೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.
2020-21ನೇ ಸಾಲಿನಲ್ಲಿ ಕೊರೊನಾದಿಂದ ಭೌತಿಕ ತರಗತಿಗಳು ಸರಿಯಾಗಿ ನಡೆಯದೇ ಇರುವ ಹಿನ್ನೆಲೆಯಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೇ.30ರಷ್ಟು ಪಠ್ಯ ಕಡಿತ ಮಾಡಿ, ಉಳಿದ ಶೇ.70ರಷ್ಟು ಪಠ್ಯದಂತೆ ತರಗತಿಗಳನ್ನು ಆನ್‌ಲೈನ್, ಆಫ್ಲೈನ್ ವ್ಯವಸ್ಥೆ ಮೂಲಕ ನಡೆಸಲಾಗಿತ್ತು ಮತ್ತು ಸದ್ಯ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೂಡ ಶೇ.70ರಷ್ಟು ಪಠ್ಯದಂತೆಯೇ ಇರಲಿದೆ. ಹಾಗೆಯೇ 1ರಿಂದ 9ನೇ ತರಗತಿ ವಿದ್ಯಾರ್ಥಿಗಳ ಪಠ್ಯವನ್ನು ನಿರ್ದಿಷ್ಟ ಶೈಕ್ಷಣಿಕ ತರಗತಿಗೆ ಅನುಗುಣವಾಗಿ ಕಡಿತ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಪ್ರಸಕ್ತ ಸಾಲಿಗೂ 2021-22ನೇ ಸಾಲಿಗೂ ಶೇ.30ರಷ್ಟು ಪಠ್ಯ ಕಡಿತ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈಗಾಗಲೇ ದೂರದರ್ಶನದ ಚಂದನ ವಾಹಿನಿ ಮೂಲಕ ರಾಜ್ಯ ಪಠ್ಯಕ್ರಮದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಪಾಠವನ್ನು ಪ್ರಸಾರ ಮಾಡಲಾಗುತ್ತಿದೆ. ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಮಾಧ್ಯಮದಲ್ಲಿ ತರಗತಿಗಳು ಪ್ರಸಾರವಾಗುತ್ತಿದ್ದು, ಸೋಮವಾರದಿಂದ ಬುಧವಾರದವರೆಗೆ 10ರಿಂದ 8ನೇ ತರಗತಿ, ಗುರುವಾರದಿಂದ ಭಾನುವಾರದವರೆಗೆ 1ರಿಂದ 7ನೇ ತರಗತಿ ಪಾಠ ಬೋಧನೆಯಾಗುತ್ತಿದೆ. ಇದರ ಜತೆಗೆ ಸೇತುಬಂಧ ಕಾರ್ಯಕ್ರಮವೂ ಸ್ಥಳೀಯವಾಗಿ ನಡೆಸಲಾಗುತ್ತಿದೆ. ಆದರೆ, ಭೌತಿಕ ತರಗತಿಗಳು ನಡೆಯದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲೂ ಶೇ.30ರಷ್ಟು ಪಠ್ಯ ಕಡಿತ ಮಾಡಬೇಕಾದ ಅನಿವಾರ್ಯತೆ ಬರಬಹುದು ಎಂದು ಅಧಿಕಾರಿಯೊಬ್ಬರು ವಿವರಿಸಿದರು.
Laxmi News 24×7