ಬೆಂಗಳೂರು (ಜುಲೈ 10); ರಾಜ್ಯ ಪ್ರಾದೇಶಿಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಸಾರ್ವಜನಿಕವಾಗಿ ಕಾಂಗ್ರೆಸ್ ಕಾರ್ಯಕರ್ತನ ಕಪಾಳಕ್ಕೆ ಬಾರಿಸುವ ಮೂಲಕ ಸುದ್ದಿಯಾಗಿದ್ದರು. ಡಿ.ಕೆ. ಶಿವಕುಮಾರ್ ಕಾರ್ಯಕರ್ತನ ಕಪಾಳಕ್ಕೆ ಬಾರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ, ಈ ವಿಡಿಯೋವನ್ನು ರಾಷ್ಟ್ರೀಯ ಮಾಧ್ಯಮಗಳೂ ಪ್ರಸಾರ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷರ ವರ್ತನೆಯನ್ನು ಕಟುವಾಗಿ ವಿಮರ್ಶೆ ಮಾಡಿತ್ತು. ಕರ್ನಾಟಕ ಬಿಜೆಪಿ ಘಟಕ ಸಹ ಡಿಕೆ ಶಿವಕುಮಾರ್ ಅವರ ಈ ನಡವಳಿಕೆಯನ್ನು ಟ್ವಿಟರ್ ಮೂಲಕ ಕಟು ವಿಮರ್ಶೆ ಮಾಡಿದ್ದು, ” ಡಿಕೆಶಿಯವರೇ, ನೀವು ರಾಜಕಾರಣಿಯೋ- ರೌಡಿಯೋ ಅಥವಾ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ?” ಬಿಜೆಪಿ ಕಿಡಿಕಾರಿದೆ.
ಸರಣಿ ಟ್ವೀಟ್ ಮೂಲಕ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಜ್ಯ ಘಟಕ, “ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ? ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದುಕೊಂಡು ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ಮಾಡಿರುವುದು ಅಕ್ಷಮ್ಯ. ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಒಬ್ಬ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ, ಮಾಧ್ಯಮಗಳ ಎದುರು ಹಲ್ಲೆ ಮಾಡುವುದು ಡಿಕೆಶಿ ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತಿದೆ. ಈ ಹಿಂದೆ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ!?” ಎಂದು ಕಿಡಿಕಾರಿದೆ.
Laxmi News 24×7