ಬೆಂಗಳೂರು: ನಗರದಲ್ಲಿ ದಿನೇ ದಿನೇ ರೂಪಾಂತರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗ್ತಿದೆ. ಲ್ಯಾಬ್ಗೆ ಕಳುಹಿಸಿದ ಬಹುತೇಕ ಸ್ಯಾಂಪಲ್‌ಗಳೆಲ್ಲವೂ ರೂಪಾಂತರಿ ವೈರಸ್ ಅಂತ ದೃಢಪಟ್ಟಿದೆ. ನಗರದ ಶೇಕಡಾ 70ರಷ್ಟು ಸೋಂಕಿತರಿಗೆ ರೂಪಂತರಿ ವೈರಸ್ ತಗುಲಿರೋದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆ ಸಾಂಕ್ರಾಮಿಕ ನಿಯಂತ್ರಣಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಫುಲ್ ಆಯಕ್ಟೀವ್ ಆಗಿದ್ದು, ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟ್ ಹೆಚ್ಚಳ ಮಾಡಲು ನಿರ್ಧರಿಸಿದೆ. ಈ ಹಿಂದೆ ಪಾಸಿಟಿವ್ ಬಂದ ಶೇಕಡಾ 5ರಷ್ಟು ಸ್ಯಾಂಪಲ್ಸ್ ಮಾತ್ರ ಜಿನೋಮಿಕ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗ್ತಿತ್ತು. ಅದನ್ನೀಗ ಮತ್ತಷ್ಟು ಹೆಚ್ಚಳ ಮಾಡೋಕೆ ಬಿಬಿಎಂಪಿ ನಿರ್ಧಾರ ಮಾಡಿದೆ. ಅತ್ಯಂತ ವೇಗವಾಗಿ ಹರಡುವ ವೈರಸ್ ಇನ್ನಷ್ಟು ಹರಡದಂತೆ ತಡೆಯಲು ಪಾಲಿಕೆ ಪ್ಲಾನ್ ಮಾಡಿಕೊಂಡಿದೆ. ಜಿನೋಮ್ ಸೀಕ್ವೆನ್ಸಿಂಗ್ನಲ್ಲಿ ರೂಪಾಂತರದ ಬಗ್ಗೆ ಮಾಹಿತಿ ತಿಳಿಯಲಿದೆ.
ಬ್ರೆಜಿಲ್ನಲ್ಲಿ ಬೀಟಾ, ಗಾಮಾ ತಳಿಯ ವೈರಸ್ ಕಾಣಿಸಿಕೊಂಡಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನಲ್ಲಿ ಡೆಲ್ಟಾ ತಳಿ ಕೊರೊನಾವೈರಸ್ ಕಾಡುತ್ತಿದೆ. ಇದ್ರಿಂದ ಎಚ್ಚೆತ್ತುಕೊಂಡಿರೋ ಬಿಬಿಎಂಪಿ ರೂಪಾಂತರಿ ವೈರಸ್ ಪತ್ತೆಹಚ್ಚಲು ಹೆಚ್ಚಿನ ಸ್ಯಾಂಪಲ್‌ಗಳನ್ನ ಕಳುಹಿಸಲು ಮುಂದಾಗಿದೆ. ಸದ್ಯ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ಗೆ ನಗರದಲ್ಲಿ ಒಂದು ಪ್ರತ್ಯೇಕ ಲ್ಯಾಬ್ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಎರಡು ಪ್ರತ್ಯೇಕ ಲ್ಯಾಬ್ ಮೀಸಲಿಡಲು ತೀರ್ಮಾನಿಸಲಾಗಿದೆ.
ಜಿನೋಮ್ ಸೀಕ್ವೆನ್ಸಿಂಗ್ ಹೆಚ್ಚಳದ ಬಗ್ಗೆ ತಜ್ಞರು ನೀಡುವ ಸಲಹೆ ಮೇರೆಗೆ ಬಿಬಿಎಂಪಿ ಕ್ರಮಕ್ಕೆ ಮುಂದಾಗ್ತಿದೆ. ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗಿದೆ. ಕೇರಳದಲ್ಲಿ ಶೇಕಡಾ 10 ಹಾಗೂ ಮಹಾರಾಷ್ಟ್ರದಲ್ಲಿ ಶೇಕಡಾ 5ರಷ್ಟು ಪಾಸಿಟಿವಿಟಿ ದರ ಇದೆ. ಕರ್ನಾಟಕದಲ್ಲಿ ಪ್ರಸ್ತುತ ಶೇಕಡ 2ರಷ್ಟು ಪಾಸಿಟಿವಿಟಿ ರೇಟ್ ಇದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ರೂಪಾಂತರಿ ವೈರಸ್ ಹೆಚ್ಚಾದ ಬೆನ್ನಲ್ಲೇ ಬೆಂಗಳೂರಿಗೂ ಆತಂಕ ಮೂಡಿದೆ.