ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿದೆ.
ಹುಬ್ಬಳ್ಳಿ – ಧಾರವಾಡ ಭಾಗದಲ್ಲಿ ಹೆಚ್ಚಿನ ಮಳೆ ಹಿನ್ನಲೆಯಲ್ಲಿ ಯಲ್ಲಾಪುರ ಭಾಗದ ಹಲವು ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಮಂಚಿಕೇರಿಯ ಹಲವು ಭಾಗದ ಕೃಷಿ ಭೂಮಿಗೂ ನೀರು ನುಗ್ಗಿದೆ. ಯಲ್ಲಾಪುರ -ಮಂಚಿಕೇರಿ ಸೇತುವೆ ಕೊಚ್ಚಿಹೋದ್ದರಿಂದ ನಗರ ಸಂಪರ್ಕ ಸಂಪೂರ್ಣ ಕಡಿತವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದೂ ಕೂಡ ಮಳೆಯ ಅಬ್ಬರ ಮುಂದುವರರಿದಿದೆ. ಕರಾವಳಿ ಭಾಗದ ಕಾರವಾರ,ಕುಮಟಾ ಭಾಗದ ಗೋಕರ್ಣದಲ್ಲಿ ಮಳೆ,ಗಾಳಿ ಅಬ್ಬರದ ಜೊತೆ ಸಮುದ್ರದ ಅಲೆಗಳು ಹೆಚ್ಚಾದ ಕಾರಣ ಸಮುದ್ರ ತೀರ ಪ್ರದೇಶದ ಹಲವು ಭಾಗದಲ್ಲಿ ನೀರು ನುಗ್ಗಿ ನಷ್ಟ ತಂದೊಡ್ಡಿದೆ.
ಗೋಕರ್ಣದ ಮುಖ್ಯರಸ್ತೆಯಲ್ಲಿ ನೀರು ತುಂಬಿ ಮನೆಗಳಿಗೆ ನುಗ್ಗಿವೆ. ಇದಲ್ಲದೇ ಇದೇ ಪ್ರದೇಶದಲ್ಲಿರುವ ದುರ್ಗಾ ದೇವಿ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದ್ದು ಇನ್ನೂ ಹೆಚ್ಚಿನ ಮಳೆಯಾದಲ್ಲಿ ಹಲವು ಮನೆಗಳು ಜಲಾವೃತವಾಗುವ ಸಾಧ್ಯತೆಗಳಿವೆ.