ನವದೆಹಲಿ: ನಿಯಂತ್ರಿತ ಮಾರುಕಟ್ಟೆಗಳ ಸಾಮರ್ಥ್ಯ ವೃದ್ಧಿ ಮತ್ತು ರೈತರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಕೃಷಿ ಮೂಲಸೌಕರ್ಯ ನಿಧಿಯಿಂದ (ಎಐಎಫ್) ₹ 1 ಲಕ್ಷ ಕೋಟಿ ವರೆಗೆ ಆರ್ಥಿಕ ನೆರವು ನೀಡಲಾಗುವುದು. ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಗಳು ನೆರವು ಪಡೆಯಲು ಅರ್ಹವಾಗಲಿವೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರದ ಯೋಜನೆಗೆ ಅನುಮೋದನೆ ದೊರೆತಿದೆ.
ಕೇಂದ್ರದ ನಿರ್ಧಾರದ ಬಗ್ಗೆ ಮಾತನಾಡಿದ ತೋಮರ್, ʼಎಪಿಎಂಸಿಗಳನ್ನು ಮುಚ್ಚಲಾಗುವುದಿಲ್ಲ, ಬದಲಾಗಿ ಅವುಗಳನ್ನು ಬಲಪಡಿಸಲಾಗುವುದು ಎಂದು ಬಜೆಟ್ (2021-22) ವೇಳೆ ಹೇಳಿದ್ದೆವು. ಅದನ್ನು ಗಮನದಲ್ಲಿರಿಸಿ, ಕೃಷಿ ಮೂಲಸೌಕರ್ಯ ನಿಧಿಯಿಂದ ₹ 1 ಲಕ್ಷ ಕೋಟಿ ವರೆಗೆ ಆರ್ಥಿಕ ನೆರವು ಪಡೆಯಲು ಎಪಿಎಂಸಿಗಳಿಗೆ ಅನುವು ಮಾಡಿಕೊಡಲು ಸಂಪುಟ ನಿರ್ಧರಿಸಿದೆʼ ಎಂದು ತಿಳಿಸಿದ್ದಾರೆ.
ಹೊಸ ಕೃಷಿ ಕಾನೂನುಗಳು ಜಾರಿಯಾದರೆ ಎಪಿಎಂಸಿಗಳನ್ನು ರದ್ದುಮಾಡಲಾಗುವುದು ಎಂಬ ಆತಂಕವಿದೆ. ಆದರೆ, ಎಪಿಎಂಸಿ ಮಾರುಕಟ್ಟೆಗಳನ್ನು ಮುಚ್ಚಲಾಗುವುದಿಲ್ಲ ಎಂದು ತೋಮರ್ ಪುನರುಚ್ಚರಿಸಿದರು. ʼಮೂರು ಕೃಷಿ ಕಾನೂನುಗಳ ಅನುಷ್ಠಾನದ ಬಳಿಕ, ಎಪಿಎಂಸಿಗಳಿಗೆ ಎಐಎಫ್‌ನಿಂದ ಹಣ ದೊರೆಯಲಿದೆʼ ಎಂದು ಹೇಳಿದ್ದಾರೆ.
ಕೋಲ್ಡ್ ಸ್ಟೋರೇಜ್, ವರ್ಗೀಕರಣ ವಿಭಾಗ, ಶ್ರೇಣೀಕರಣ ವ್ಯವಸ್ಥೆಯಂತಹ ವಿವಿಧ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರತಿ ಯೋಜನೆಗೆ ₹ 2 ಕೋಟಿ ವರೆಗೆ ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸುಗ್ಗಿಯ ಬಳಿಕ ಸಾರ್ವಜನಿಕ ಮಾರುಕಟ್ಟೆ ಮೂಲಸೌಕರ್ಯ ವ್ಯವಸ್ಥೆಯನ್ನು ಎಲ್ಲ ರೈತರಿಗೆ ಸಿಗುವಂತೆ ಮಾಡುವ ಸಲುವಾಗಿ ಎಪಿಎಂಸಿಗಳನ್ನು ತೆರೆಯಲಾಗಿದೆ.
ಎಪಿಎಂಸಿಗಳು ಮಾತ್ರವಲ್ಲದೆ, ನಿಧಿಯ ವತಿಯಿಂದ ರಾಜ್ಯ ಏಜೆನ್ಸಿಗಳು, ರಾಷ್ಟ್ರೀಯ ಮತ್ತು ರಾಜ್ಯ ಫೆಡರೇಷನ್‌ಗಳು, ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಹಾಗೂ ಸ್ವಯಂಸೇವಾ ಸಂಘಟನೆಗಳೂ ಆರ್ಥಿಕ ನೆರವು ಪಡೆಯಬಹುದಾಗಿದೆ ಎಂದು ತೋಮರ್ ಹೇಳಿದ್ದಾರೆ.