ಬೆಂಗಳೂರು: 15ನೇ ಹಣಕಾಸು ಆಯೋಗ 5,495 ಕೋಟಿ ರೂ ವಿಶೇಷ ಅನುದಾನ ಕೊಡಬೇಕು. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಡೆಹಿಡಿದಿದ್ದಾರೆ. ಇದರ ಬಗ್ಗೆ ಕೇಳೋಕೆ ಸಿಎಂ ಯಡಿಯೂರಪ್ಪಗೆ ದಮ್ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉಚಿತ ದಿನಸಿ ಕಿಟ್ ವಿತರಿಸಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಕ್ಕೆ ಬರಬೇಕಿದ್ದ 5,495 ಕೋಟಿ ರೂ ವಿಶೇಷ ಅನುದಾನವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಡೆಹಿಡಿದಿದ್ದಾರೆ. ಇದರ ಬಗ್ಗೆ ಕೇಳೋಕೆ ಸಿಎಂ ಯಡಿಯೂರಪ್ಪಗೆ ದಮ್ ಇಲ್ಲ. ನಾನು ಮುಖ್ಯಮಂತ್ರಿಯಾಗಿದ್ದರೆ ಇಂದು ನಿರ್ಮಲಾ ಸೀತಾರಾಮನ್ ನಿವಾಸದ ಮುಂದೆ ಪ್ರತಿಭಟನೆ ಮಾಡುತ್ತಿದ್ದೆ ಎಂದು ಹೇಳಿದರು.
ಇನ್ನು ರಾಜ್ಯದಿಂದ ಪ್ರತಿನಿಧಿಸುವ ನಾಲ್ವರು ಸಚಿವರಿದ್ದಾರೆ ಎಂದು ಇವರು ಹೇಳಿಕೊಳ್ಳುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಇದ್ದಾರೆ, ಪ್ರಹ್ಲಾದ ಜೋಶಿ ಮಂತ್ರಿ ಇದ್ದಾರೆ, ಈಗ ಹೊಸ ಮಂತ್ರಿಗಳು ಆಗಿದ್ದಾರೆ. ಇಷ್ಟೆಲ್ಲಾ ಇದ್ರೂ ನಮ್ಮ ಹಣ ತರೋಕೆ ಅಗಲಿಲ್ಲ. ಇವರೆಲ್ಲಾ ಊಟಕ್ಕೆ ಇಲ್ಲದ ಉಪ್ಪಿನಕಾಯಿ. ರಾಜ್ಯದಿಂದ 25 ಸಂಸದರು ಇದ್ದಾರೆ. ಆರು ಜನ ಮಂತ್ರಿಗಳಾದ್ರೂ ಎಂದು ಹೇಳ್ತಾರೆ. ಎಷ್ಟು ಜನ ಸಚಿವರಾದ್ರೇನು ಪ್ರಯೋಜನ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸದಾನಂದಗೌಡ ಯೂಸ್ ಲೆಸ್ ಎಂದು ಬಿಟ್ಟಿದ್ದಾರೆ. ಆರು ಜನ ಸಚಿವರಾದ್ರೂ ಪ್ರಯೋಜನವಿಲ್ಲ. ನಮಗೆ ಬರುವ ಹಣವ ತರಲು ಆಗಿಲ್ಲ ಎಂದು ಟೀಕೆ ಮಾಡಿದರು.