ಬೆಂಗಳೂರು: ‘ಫಾದರ್ ಸ್ಟ್ಯಾನ್ ಸ್ವಾಮಿ ಅವರ ಸಾವಿನ ಪ್ರಕರಣವನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಅವರ ಅಭಿಪ್ರಾಯದಂತೆಯೇ ‘ಲಾಕಪ್ ಡೆತ್’ ಎಂದು ಪರಿಗಣಿಸಿ, ವಿಚಾರಣೆ ನಡೆಸಬೇಕು’ ಎಂದು ಕಡಿದಾಳು ಶಾಮಣ್ಣ, ದೇವನೂರ ಮಹಾದೇವ, ರಾಜೇಶ್ವರಿ ತೇಜಸ್ವಿ, ಸಾರಾ ಅಬೂಬಕ್ಕರ್, ವೈದೇಹಿ, ಡಿ.ಎಸ್. ನಾಗಭೂಷಣ ಸೇರಿದಂತೆ ಚಿಂತಕರು, ಬರಹಗಾರರು, ಹೋರಾಟಗಾರರು ಆಗ್ರಹಿಸಿದ್ದಾರೆ.
ಈ ಕುರಿತು ಬುಧವಾರ ಜಂಟಿ ಹೇಳಿಕೆ ನೀಡಿರುವ ಅವರು, ‘ಸ್ಟ್ಯಾನ್ ಸ್ವಾಮಿಯವರ ಸಾವಿನ ಪ್ರಕರಣ ಮಾನವೀತೆಯ ಪಸೆಯುಳ್ಳ ಯಾರನ್ನಾದರೂ ತಲ್ಲಣಗೊಳಿಸುವಂಥ ಘಟನೆ. ಈ ಪ್ರಕರಣವು, ಸೆರೆಮನೆಗಳಲ್ಲಿ ಕೊಳೆಯುತ್ತಿರುವ ಲಕ್ಷಾಂತರ ಜನ ‘ನಿರಪರಾಧಿ’ಗಳ ದುಸ್ಥಿತಿಯ ಬಗ್ಗೆ ನಮ್ಮ ಗಮನ ಸೆಳೆಯುವಂತೆ ಮಾಡಿದೆ. ಸ್ಟ್ಯಾನ್ ಸ್ವಾಮಿಯವರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ನಾಗೇಶ್ ಹೆಗಡೆ, ಬಿ.ಎನ್. ಶ್ರೀರಾಮ, ರಾಜೇಂದ್ರ ಚೆನ್ನಿ, ಎಚ್.ಎಸ್. ರಾಘವೇಂದ್ರ ರಾವ್, ಸವಿತಾ ನಾಗಭೂಷಣ, ಓ.ಎಲ್, ನಾಗಭೂಷಣಸ್ವಾಮಿ, ಸಿ.ಚೆನ್ನಬಸವಣ್ಣ, ಸಂತೋಷ್ ಕೌಲಗಿ, ಕೆ.ಟಿ.ಗಂಗಾಧರ, ಚುಕ್ಕಿ ನಂಜುಂಡಸ್ವಾಮಿ, ಆರ್.ಪಿ. ವೆಂಕಟೇಶಮೂರ್ತಿ, ಇಂದೂಧರ ಹೊನ್ನಾಪುರ, ಜಿ.ಬಿ. ಶಿವರಾಜು, ವೆಂಕಟೇಶ ಮಾಚಕನೂರ, ಎಂ.ಜಿ.ಈಶ್ವರಪ್ಪ ಮತ್ತು ಶೇಖರ್ ಗೌಳೇರ್ ಜಂಟಿ ಹೇಳಿಕೆಗೆ ಸಹಿ ಮಾಡಿದ್ದಾರೆ.
‘ಖಾಸಗಿ ಕಂಪನಿಗಳು ನಡೆಸುತ್ತಿದ್ದ ಪರಿಸರ ನಾಶ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸು ಜೈಲು ಸೇರಿದ್ದ ಜಾರ್ಖಂಡ್‌ನ ಆದಿವಾಸಿಗಳ ಪರವಾಗಿ ಸ್ಟ್ಯಾನ್ ಸ್ವಾಮಿ ಹೋರಾಡುತ್ತಿದ್ದರು. ಇದೇ ಕಾರಣಕ್ಕಾಗಿ ಪ್ರಭುತ್ವವು, ಪ್ರಧಾನಿ ನರೇಂದ್ರ ಮೋದಿ ಅವರ ಕೊಲೆಗೆ ಸಂಚು ರೂಪಿಸಿದ ಆರೋಪವನ್ನು ಅವರ ಮೇಲೆ ಹೊರಿಸಿತ್ತು. ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಸ್ವಾಮಿಯವರ ವಿಚಾರದಲ್ಲಿ ಅತ್ಯಂತ ನಿರ್ದಯವಾಗಿ ನಡೆದುಕೊಂಡಿವೆ’ ಎಂದು ದೂರಿದ್ದಾರೆ.
ವಯಸ್ಸು ಮತ್ತು ಅನಾರೋಗ್ಯದ ಕಾರಣ ನೀಡಿ ಜಾಮೀನು ಕೋರಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಲೋಟ ಎತ್ತಿ ನೀರು ಕುಡಿಯಲಾಗದ, ಆಹಾರ ಸೇವಿಸಲಾಗದ ಅಸಹಾಯಕ ಸ್ಥಿತಿಯಲ್ಲಿದ್ದ ಸ್ಟ್ಯಾನ್ ಸ್ವಾಮಿ ಅವರಿಗೆ ಹೀರು ಕೊಳವೆ ನೀಡುವುದರ ಕುರಿತು ಅಭಿಪ್ರಾಯ ನೀಡುವುದಕ್ಕೆ ತನಿಖಾ ಸಂಸ್ಥೆ ಇಪ್ಪತ್ತು ದಿನಗಳನ್ನು ತೆಗೆದುಕೊಂಡಿತ್ತು. ಜಾಮೀನು ಅರ್ಜಿಗೆ ಸಂಬಂಧಿಸಿದ ಮುಂಬೈ ಹೈಕೋರ್ಟ್ ನೀಡಿದ್ದ ನೋಟಿಸ್‌ಗೆ ಎರಡು ತಿಂಗಳ ಬಳಿಕ ಉತ್ತರ ಸಲ್ಲಿಸಿತು. ಇಷ್ಟೆಲ್ಲ ಮಾಡಿದ ಪ್ರಭುತ್ವ ಈಗ ಸಾವಿನ ಪ್ರಕರಣದ ಹೊಣೆಯಿಂದ ಪಾರಾಗಲು ಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ.
‘ನಮ್ಮ ಪ್ರಭುತ್ವವು ಎಷ್ಟು ಸೇಡಿನ ಗೂಡಾಗಿ, ಹೃದಯ ಹೀನವಾಗಿದೆ ಮತ್ತು ನ್ಯಾಯಾಂಗ ವ್ಯವಸ್ಥೆ ಹೇಗೆ ಅಸಹಾಯಕವಾಗಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ದೌರ್ಬಲ್ಯದಿಂದ ವಿಚಾರಣೆಯೇ ಇಲ್ಲದೆ ಸೆರೆಮನೆಗಳಲ್ಲಿ ಕೊಳೆಯುತ್ತಿರುವವರ ಬಗ್ಗೆ ಚಿಂತಿಸುವಂತೆ ಮಾಡಿದೆ ಈ ಪ್ರಕರಣ’ ಎಂದು ಹೇಳಿದ್ದಾರೆ.