ಬೆಳಗಾವಿ: ಮಹಾನಗರ ಸಹಿತ ಜಿಲ್ಲೆಯ ಅನೇಕ ಕಡೆಗಳಲ್ಲಿ ನಿನ್ನೆ ಮಂಗಳವಾರದಿಂದ ಸತತವಾಗಿ ಮಳೆ
ಸುರಿಯುತ್ತಿದ್ದು ಕಳೆದ ವರ್ಷದ ಪ್ರವಾಹದ ಭೀತಿ ಮತ್ತೆ ಉಂಟಾಗಿದೆ.
ಖಾನಾಪುರ, ಬೈಲಹೊಂಗಲ ಮುಂತಾದ ಪ್ರದೇಶಗಳಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿರು ವದರಿಂದ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಆಣೆಗೆ ಒಳಹರಿವಿನ ಪ್ರಮಾಣ ಬುಧವಾರ ಸಂಜೆಗೆ 30 ಸಾವಿರ ಕ್ಯೂಸೆಕ್ಸ ತಲುಪಿದೆ.
ಆಣೆಕಟ್ಟಿನ ಒಟ್ಟು ಎತ್ತರ 2079.5 ಅಡಿ.ಸದ್ಯ 2023 ಅಡಿಗಳವರೆಗೆ ನೀರು ನಿಂತಿದೆ.ಆಣೆಯ ಒಟ್ಟು ಸಾಮರ್ಥ್ಯ 37.7 ಟಿಎಮ್ ಸಿ. ಇಂದಿನವರೆಗೆ 18 ಟಿ ಎಮ್ ಸಿ ನೀರಿನ ಸಂಗ್ರಹವಾಗಿದೆ. ಇದೇ ರೀತಿ ಮಳೆಯ ಅರ್ಭಟ ಮುಂದುವರೆದರೆ ಒಂದು ವಾರದಲ್ಲಿ ಆಣೆಕಟ್ಟು ಪೂರ್ತಿ ಭರ್ತಿಯಾಗಲಿದೆ.ಈ ಹಿನ್ನೆಲೆಯಲ್ಲಿ ನೀರಿನ ಸಂಗ್ರಹ 23 ಟಿ ಎಮ್ ಸಿ ಗೆ ತಲುಪಿದ ಕೂಡಲೇ ಆಣೆಕಟ್ಟಿನಿಂದ ನೀರು ಬಿಡುಗಡೆ ಆರಂಭವಾಗಲಿದೆ.
ನೀರು ಬಿಡುಗಡೆ ಆರಂಭವಾದಲ್ಲಿ ಸವದತ್ತಿ,ರಾಮದುರ್ಗ,ಬದಾಮಿ,ರೋಣ ತಾಲೂಕುಗಳ ನದಿ ತೀರದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವದು ಸೂಕ್ತ.ಕಳೆದ ವರ್ಷ ಮಲಪ್ರಭೆಗೆ ಪ್ರವಾಹ ಉಂಟಾಗಿ ಅನೇಕ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಸಾವು ನೋವುಗಳು ಸಂಭವಿಸಿದ್ದವು. ಸಾವಿರಾರು ಮನೆಗಳು ನೆಲಕ್ಕೆ ಉರುಳಿದ್ದವು.
ನದಿ ತೀರದ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.ಜಿಲ್ಲಾ ಮತ್ತು ತಾಲೂಕು ಆಡಳಿತಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಂತಿವೆ. ಜನತೆಗೆ ಮುನ್ನೆಚ್ಚರಿಕೆ ನೀಡುವ ಮೂಲಕ ಇನ್ನೂ ಹೆಚ್ಚಿನ ಮುಂಜಾಗ್ರತೆ ವಹಿಸುವದು ಒಳ್ಳೆಯದು.
-ಅಶೋಕ ಚಂದರಗಿ
ಅಧ್ಯಕ್ಷರು, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ