ಬನಹಟ್ಟಿ: ಕಳೆದ ವರ್ಷ ನ.9 ರಂದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆ ವೇಳೆ ಮಹಿಳಾ ಸದಸ್ಯೆಯರ ಎಳೆದಾಟದ ಗಲಾಟೆಗೆ ಸಂಬಂಧಿಸಿದಂತೆ ಡಿವೈಎಸ್ಪಿ ಎಸ್. ಸತ್ಯವತಿ ನೇತೃತ್ವದ ಸಿಐಡಿ ಅಧಿಕಾರಿಗಳ ತಂಡ ಬನಹಟ್ಟಿಯ ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರದಲ್ಲಿ ಸೋಮವಾರ ರಾತ್ರಿವರೆಗೂ ತೇರದಾಳ ಶಾಸಕ ಸಿದ್ದು ಸವದಿ ಹಾಗು ಅಂದಿನ ರಬಕವಿ-ಬನಹಟ್ಟಿ ತಹಶೀಲ್ದಾರರಾಗಿದ್ದ ಪ್ರಶಾಂತ ಚನಗೊಂಡ ಅವರನ್ನು ಪ್ರತ್ಯೇಕವಾಗಿ ತೀವ್ರ ವಿಚಾರಣೆ ನಡೆಸಿತು.
ಮೂರು ದಿನಗಳಿಂದ ವಿಚಾರಣೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳು ಸೋಮವಾರ ಬನಹಟ್ಟಿಯ ಅತಿಥಿ ಗೃಹದಲ್ಲಿ ವಿಚಾರಣೆ ಕೈಗೊಂಡರು. ಸಂಜೆ ಹೊತ್ತು ಸುಮಾರು 2 ಗಂಟೆಗಳ ಕಾಲ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರನ್ನು ವಿಚಾರಣೆ ನಡೆಸುವ ಮೂಲಕ ಪ್ರತ್ಯೇಕ ಹೇಳಿಕೆ ಪಡೆದಿದ್ದು, ನಂತರ ರಾತ್ರಿ 8 ಗಂಟೆಯಿಂದ ತೇರದಾಳ ಶಾಸಕ ಸಿದ್ದು ಸವದಿಯವರಿಂದಲೂ ಪ್ರತ್ಯೇಕ ಹೇಳಿಕೆ ಪಡೆಯಲಾಗಿದೆ ಎನ್ನಲಾಗಿದೆ.
ನಾಲ್ಕು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು 93 ಜನರ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಮುಂದಿನ ವಿಚಾರಣೆ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ ಎಂಬ ಮಾಹಿತಿ ತಿಳಿಸಿದು ಬಂದಿದೆ.
ಸಿಐಡಿ ವಿಚಾರಣೆ ನಂತರ ಮಾತನಾಡಿದ ತಹಶೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿ, ಚುನಾವಣೆ ಪ್ರಕ್ರಿಯೆಯಲ್ಲಿ ನಾನು ತೊಡಗಿದ್ದೆ, ಗಲಾಟೆ ಕುರಿತಾದ ಮಾಹಿತಿ ಸ್ಪಷ್ಟವಿಲ್ಲದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದೇನೆ ಎಂದರು.