ರಾಯಚೂರು: ಸುಮಾರು ವರ್ಷಗಳಿಂದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ರಾಜೋಳಿ ಬಂಡಾ ಜಲಾಶಯದ ನೀರು ಹಂಚಿಕೆ ವಿಚಾರವಾಗಿ ಆಂಧ್ರ – ತೆಲಂಗಾಣ ನಡುವೆ ಗಲಾಟೆ ನಡೆಯುತ್ತಲೇ ಇದೆ. ಇಷ್ಟು ದಿನ ರಾಜೋಳಿ ಬಂಡಾ ಜಲಾಶಯದ ನೀರನ್ನು ಕೇವಲ ತೆಲಂಗಾಣಕ್ಕೆ ಮಾತ್ರ ಬಿಡಲಾಗುತ್ತಿತ್ತು. ಈಗ ಆಂಧ್ರದ ರಾಯಲಸೀಮ ಪ್ರದೇಶಕ್ಕೂ ಈ ಜಲಾಶಯದ ನೀರು ಬೇಕು ಎಂಬ ಕೂಗು ಕೇಳಿ ಬಂದಿದೆ.
ರಾಜೋಳಿ ಬಂಡಾ ಜಲಾಶಯದ ನೀರನ್ನು ನಮಗೂ ಬಿಡಿ ಎಂದು ಆಂಧ್ರದ ರೈತರು ಪಟ್ಟು ಹಿಡಿದ ಪರಿಣಾಮ ತೆಲಂಗಾಣದವರು ಹೋರಾಟಕ್ಕೆ ಮುಂದಾಗಿದ್ದಾರೆ. ತೆಲಂಗಾಣ ಮತ್ತು ಆಂಧ್ರದ ರೈತರ ಹೋರಾಟವೀಗ ಕರ್ನಾಟಕ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಇದು ರಾಯಚೂರು ಜಿಲ್ಲೆಯ ಗಡಿಭಾಗದಲ್ಲೇ ನಡೆಯುತ್ತಿರುವ ಘಟನೆಯಾದ್ದರಿಂದ, ಕರ್ನಾಟಕ ಪೊಲೀಸರು ಎರಡು ರಾಜ್ಯಗಳ ರೈತರನ್ನು ಕೂರಿಸಿ ಸಮಸ್ಯೆ ಬಗೆಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತ ನಮಗೂ ನೀರು ಬಿಡಿ ಎಂದು ಆಂಧ್ರ ರೈತರು, ಇತ್ತ ನಿಮಗೆ ಕೊಟ್ಟರೆ ನಮಗೆ ನೀರಿಗೆ ಅಭಾವ ಸೃಷ್ಟಿಯಾಗಲಿದೆ ಎಂದು ತೆಲಂಗಾಣ ರೈತರು ಬೀದಿಗಿಳಿದು ಜಗಳ ಮಾಡುತ್ತಿದ್ದಾರೆ.
ಸದ್ಯ ಕರ್ನಾಟಕ ಪೊಲೀಸರು ಮಧ್ಯಪ್ರವೇಶಿಸಿ ಎರಡು ರಾಜ್ಯಗಳ ರೈತರ ನಡುವಿನ ಘರ್ಷಣೆ ತಪ್ಪಿಸಿದ್ದಾರೆ. ಈ ಗಲಭೆ ತಡೆಯಲು ರಾಯಚೂರು ಪೊಲೀಸರು ಹರಸಾಹಸಪಟ್ಟಿದ್ದಾರೆ.