ಮಂಗಳೂರು, ಜುಲೈ 02; ಬೀದಿ ನಾಯಿಗೆ ಗುಂಡು ಹಾರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರು ನಗರದ ಕದ್ರಿ ಶಿವಭಾಗ್ ಎಂಬಲ್ಲಿ ನಡೆದಿದೆ. ನಾಯಿಯ ಮರಣೋತ್ತರ ಪರೀಕ್ಷೆಯಲ್ಲಿ ಗುಂಡು ಪತ್ತೆಯಾಗಿದ್ದು, ಸ್ಥಳೀಯ ವ್ಯಕ್ತಿಯ ಮೇಲೆ ಸಂಶಯ ವ್ಯಕ್ತಪಡಿಸಲಾಗಿದೆ.
ಗುಂಡೇಟು ತಿಂದ ನಾಯಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಜನರು ಶಕ್ತಿನಗರದ ಆನಿಮಲ್ ಕೇರ್ ಟ್ರಸ್ಟ್‌ಗೆ ಮಾಹಿತಿ ನೀಡಿದ್ದಾರೆ. ಆನಿಮಲ್ ಕೇರ್ ಟ್ರಸ್ಟ್‌ನ ಸದಸ್ಯರು ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಬುಲೆಟ್ ಗಾಯ ನಾಯಿಯ ಬೆನ್ನ ಹಿಂಭಾಗದಲ್ಲಿ ಕಂಡುಬಂದಿದೆ.
ಗುಂಡು ಹಾರಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆನಿಮಲ್ ಕೇರ್ ಟ್ರಸ್ಟ್‌ನ ಸುಮಾ ರಮೇಶ್ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ.
ಕದ್ರಿ ಶಿವಭಾಗ್‌ನ ಜುವೈಲರಿ ಮಳಿಗೆ ಹಿಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅದೇ ರಸ್ತೆಯಲ್ಲಿ ಯಾವಾಗಲೂ ನಾಯಿ ಅಡ್ಡಾಡುತಿತ್ತು. ಯಾರಿಗೂ ತೊಂದರೆ ಕೊಡದೇ ನಿರುಪದ್ರವಿಯಾಗಿತ್ತು.
ಆದರೆ ನಾಯಿಯನ್ನು ಗುಂಡು ಹೊಡೆದವರು ಯಾರು?, ಯಾಕಾಗಿ ಹತ್ಯೆ ಮಾಡಲಾಗಿದೆ? ಎಂಬುದು ಪೊಲೀಸರ ತನಿಖೆ ಬಳಿಕ ಬಯಲಿಗೆ ಬರಲಿದೆ.