ಬೆಂಗಳೂರು: ಬಿಜೆಪಿ ಸರ್ಕಾರ ಪಾಪದ ಹಣದಿಂದಲೇ ಈ ದಿನ ಅಧಿಕಾರಕ್ಕೆ ಬಂದು ರಾಜಕಾರಣ ಮಾಡುತ್ತಿದೆ. ವಿಧಾನಸಭೆಯಿಂದ ಪಂಚಾಯಿತಿ ಮೆಂಬರ್ ವರೆಗೆ ಖರೀದಿ ಮಾಡುವ ನಡವಳಿಕೆ ಇಟ್ಟುಕೊಂಡಿರುವ ಬಿಜೆಪಿ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗುಡುಗಿದ್ದಾರೆ.
ಇಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಿ.ಕೆ ಪಾಳ್ಯದಲ್ಲಿ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಹಾಗೂ ರಾಜ್ಯ ಜೆಡಿಎಸ್ ಪ್ರಧಾನಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ನೇತೃತ್ವದಲ್ಲಿ 40 ಸಾವಿರ ದಿನಸಿ ಕಿಟ್ ಗಳನ್ನು ಹಂಚುವ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿ ಸರ್ಕಾರ ಪಾಪದ ಹಣವನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಸೂಸೈಡ್ ಮಾಡಿಕೊಳ್ಳೋಕೆ ಯಾಕೆ ಹೋದರು ಎನ್ನುವುದು ತಿಳಿದಿಲ್ಲ. ಸಮ್ಮಿಶ್ರ ಸರ್ಕಾರ ಬೀಳಿಸುವಲ್ಲಿ ಈತನೇ ಕಿಂಗ್ ಪಿನ್ ಆಗಿ ಕೆಲಸ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಅರಸಿಕೇರೆಯಲ್ಲಿ ಸ್ಪರ್ಧೆ ಮಾಡಲು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಂಪಾದನೆ ಆದ ಕಳ್ಳಹಣದಲ್ಲಿ ಜನಪ್ರತಿನಿಧಿಗಳನ್ನು ಕೊಂಡುಕೊಳ್ಳಲು ಮುಂದಾಗಿದ್ದಾರೆ. ನಾಯಕರನ್ನು ಕೊಂಡುಕೊಳ್ಳುವ ಕೆಲಸ ವಿಧಾನಸಭೆಯಲ್ಲಿ ಶುರುವಾಗಿ ಇದೀಗ ಸ್ಥಳೀಯ ಮಟ್ಟಕ್ಕೆ ವಿಸ್ತರಣೆ ಮಾಡಲಾಗಿದೆ.
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಇಂತಹ ನಡವಳಿಕೆಯನ್ನು ಬಿಡಬೇಕು. ತುರ್ತು ಪರಿಸ್ಥಿತಿ ಘೋಷಣೆ ಮಾಡದೆ ಇದ್ದರು ಸಹ ಈಗ ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಬದ್ದವಾಗಿ ಸಂವಿಧಾನದ ಪ್ರಕಾರ ಯಾವುದೇ ಸಂಸ್ಥೆಗಳು ಕೆಲಸ ಮಾಡುತ್ತಿಲ್ಲ. ಕೇವಲ ಸರ್ಕಾರದ ಆದೇಶದ ಮೇಲೆ ಮಾಡುತ್ತಿದ್ದು, ಜನಸಾಮಾನ್ಯರು ಜಾಗೃತರಾಗಬೇಕು ಇಲ್ಲದಿದ್ದರೆ, ಮುಂದಿನ ದಿನಗಳು ಇನ್ನಷ್ಟು ದುಸ್ಥರವಾಗುತ್ತೆ. ಕಾರ್ಮಿಕರಿಗೆ ಸರ್ಕಾರ ನೀಡುತ್ತಿರುವ ಫುಡ್ ಕಿಟ್‍ಗಳ ಮೇಲೆ ಬಿಜೆಪಿಯವರು ತಮ್ಮ ಫೋಟೋ ಹಾಕಿಸಿ ಪ್ರಚಾರ ಪಡೆಯುತ್ತಿದ್ದು, ಮಹಾದಾನಿಗಳು ಎಂದು ಪ್ರಚಾರ ಪಡೆದು ಅದರಲ್ಲೂ ಸಹ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆಂದು ಬಿಜೆಪಿ ಸರ್ಕಾರದ ವಿರುದ್ಧ ಹಾರಿಹಾಯ್ದರು.