ಕೊಪ್ಪಳ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳದ ಮುಸ್ಲಿಂ ಯುವಕನಲ್ಲಿ ಸಂಭ್ರಮ ಮನೆ ಮಾಡಿದೆ.ಹೌದು. ಮೂರು ವರ್ಷಗಳ ಹಿಂದೆ ಸಂಶುದ್ದೀನ್ 1 ಚೀಲ ಸಿಮೆಂಟ್‍ನೊಂದಿಗೆ ಅಯೋಧ್ಯೆಗೆ ತೆರಳಿದ್ದರು. 2017ರ ಏಪ್ರೀಲ್ 27 ರಂದು ಕೊಪ್ಪಳದಿಂದ ರೈಲು ಮೂಲಕ ತೆರಳಿ, 2017ರ ಮೇ 1 ರಂದು ಅಯೋಧ್ಯೆಯಲ್ಲಿದ್ದರು. ಅಲ್ಲದೆ ಅಂದೇ ಟ್ರಸ್ಟ್ ಗೆ ಒಂದು ಚೀಲ ಸಿಮೆಂಟ್ ನೀಡಿದ್ದರು.
ಈ ವೇಳೆ ಶ್ರೀರಾಮ ಮಂದಿರ ಶೀಘ್ರವೇ ನಿರ್ಮಾಣವಾಗಲೆಂದು ಬೇಡಿಕೊಂಡಿದ್ದರು. ಇದೀಗ ಇಂದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರುವುದಕ್ಕೆ ಸಂಶುದ್ದೀನ್ ಸಂತಸ ವ್ಯಕ್ತಪಡಿಸಿದ್ದಾರೆ.
ಆಟೋ ಚಾಲಕನಾಗಿರುವ ಶಂಶುದ್ದೀನ್, ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ನಿವಾಸಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾನಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದರು. ”ಅಯೋಧ್ಯೆ ತೀರ್ಪು ದೇಶವು ಇಂದು ಖುಷಿ ಪಡುವ ವಿಚಾರ. ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವೀಕರಿಸಿದ್ದಾರೆ. ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಬದುಕಬೇಕಿದೆ. ಕೊಪ್ಪಳ ಜಿಲ್ಲೆಯ ವತಿಯಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಹೋಗಿ ರಾಮ ಮಂದಿರ ನಿರ್ಮಾಣಕ್ಕೆ ಒಂದು ಚೀಲ ಸಿಮೆಂಟ್ ನೀಡಿ ಬಂದಿದ್ದೇನೆ. ಈ ಕೆಲಸ ಇಂದು ಸಾರ್ಥಕ ಅನಿಸುತ್ತಿದೆ ಎಂದು ಹೇಳಿದ್ದರು.
ನಾನೊಬ್ಬ ಭಾರತೀಯ, ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಬದುಕಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗವನ್ನು ಸುಪ್ರೀಂಕೋರ್ಟ್ ನೀಡಿದೆ. ಅಯೋಧ್ಯೆಯ ತೀರ್ಪನ್ನು ತಲೆಬಾಗಿ ಸ್ವೀಕರಿಸಿದ್ದೇವೆ ಎಂದು ಸಂಶುದ್ದೀನ್ ತಿಳಿಸಿದ್ದರು.