Breaking News

ಸರ್ಕಾರದ ವಿರುದ್ಧ ಗಂಭೀರ ಆರೋಪ; ರಾಜ್ಯಪಾಲರಿಗೆ ಎಚ್‌ಡಿಕೆ ಪತ್ರ

Spread the love

ಬೆಂಗಳೂರು, ಜೂನ್ 25; ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈಗಾಗಲೇ ಹಲವು ಬಾರಿ ಅವರು ಸರ್ಕಾರವನ್ನು ಅಧಿವೇಶನ ಕರೆಯಲು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿನ ಕೋವಿಡ್ ಸ್ಥಿತಿಗತಿ, ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಕನ್ನಡ, ಕನ್ನಡಿಗ, ಕರ್ನಾಟಕದ ವಿಚಾರದಲ್ಲಿ ಆಗುತ್ತಿರುವ ಹಿನ್ನಡೆ ಕುರಿತು ಚರ್ಚಿಸಲು ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.

 

ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಅತ್ಯಂತ ಗಂಭೀರ ಪರಿಸ್ಥಿತಿಗೆ ತಲುಪಿದ್ದು, ಅದರ ನಿಯಂತ್ರಣಕ್ಕಾಗಿ ಧೀರ್ಘ ಕಾಲದ ಲಾಕ್‌ಡೌನ್ ಜಾರಿ ಮಾಡಿದ್ದು, ತಮಗೆ ಗೊತ್ತಿರುವ ವಿಚಾರವೇ. ಕೋವಿಡ್ ತಂದೊಡ್ಡಿದ ಸಂಕಷ್ಟದಿಂದಾಗಿ ಒಂದೆಡೆ ಜೀವ ಹಾನಿಯಾಗಿದ್ದರೆ ಮತ್ತೊಂದು ಕಡೆ ಜನರ ಜೀವನಕ್ಕೂ ಹಾನಿಯಾಗಿದೆ. ಆದರೆ ಜೀವ, ಜೀವನಕ್ಕಾದ ತೊಂದರೆಗೆ ಸರ್ಕಾರ ನೀಡಿದ ಪರಿಹಾರ ಸೂಕ್ತವಾದುದ್ದಲ್ಲ ಎಂದು ಪತ್ರದಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ.

ಲಾಕ್‌ಡೌನ್‌ಗೆ ಪರಿಹಾರವಾಗಿ ಸರ್ಕಾರ ಘೋಷಿಸಿದ ಪ್ಯಾಕೇಜ್ ಅತ್ಯಂತ ಅಲ್ಪ ಪ್ರಮಾಣದ್ದು. ಸರ್ಕಾರ ಪ್ಯಾಕೇಜ್ ಘೋಷಣೆ ಮಾಡುವುದಕ್ಕೂ ಮೊದಲು ಸರ್ವಪಕ್ಷಗಳ ಅಭಿಪ್ರಾಯವನ್ನು ಒಮ್ಮೆ ಕೇಳಬೇಕಿತ್ತು. ರಾಜ್ಯದ 224 ಕ್ಷೇತ್ರಗಳ ಪ್ರತಿನಿಧಿಗಳ ಮಾತುಗಳನ್ನು ಕೇಳಬೇಕಿತ್ತು. ಆದರೆ ಇದ್ಯಾವುದೂ ಆಗಿಲ್ಲ. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ನೀಡಲಾಗುತ್ತಿರುವ ಪರಿಹಾರದಲ್ಲಿ ಸರ್ಕಾರ ತಾರತಮ್ಯ ಮತ್ತು ಜಿಪುಣತನಗಳನ್ನು ಪ್ರದರ್ಶಿಸಿದ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಬಿಪಿಎಲ್ ಕಾರ್ಡುದಾರರಿಗೆ ಒಂದು ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದ ಸರ್ಕಾರ ಅದರಲ್ಲಿಯೂ ಎಲ್ಲರಿಗೂ ನೀಡದೇ ಮಾನದಂಡಗಳನ್ನು ವಿಧಿಸುತ್ತಿದೆ. ಇದರ ಜೊತೆಗೆ ಬಡ ಮಧ್ಯಮ ವರ್ಗವೂ ಅಶಕ್ತ ಸಮಯದಾಯವೇ. ಅವರಿಗೂ ಪರಿಹಾರ ನೀಡಬೇಕಿತ್ತು, ಪರಿಹಾರದ ಮೊತ್ತ ಹೆಚ್ಚಾಗಬೇಕಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೋವಿಡ್ 3ನೇ ಅಲೆ ಸದ್ಯ ಮೂರನೇ ಅಲೆ ಬಾಗಿಲ ಬಳಿ ನಿಂತಿದೆ. ಹಿಂದಿನ ವೈಫಲ್ಯಗಳು ಮುಂದೆ ಆಗಬೇಕಾದದ್ದನ್ನು ಸೂಕ್ತ ರೀತಿಯಿಂದ ಚರ್ಚಿಸಲು ಸಮರ್ಥವಾಗಿ ಮುಂದಡಿ ಇಡಲು ವಿಶೇಷ ಅಧಿವೇಶನ ಕರೆಯುವ ಅಗತ್ಯವಿದೆ. ಎಲ್ಲರ ಅಭಿಪ್ರಾಯವನ್ನು ಕೇಳಿ ಮುಂದುವರೆಯುವುದು ಪ್ರಜಾಸತ್ತಾತ್ಮಕ ಮಾರ್ಗವೂ ಹೌದು ಎಂದು ಪತ್ರದಲ್ಲಿ ಹೇಳಿದ್ದಾರೆ.

ಭ್ರಷ್ಟಾಚಾರ ಆರೋಪ ರಾಜ್ಯ ಸರ್ಕಾರದ ಮೇಲೆ ಭಾರಿ ಪ್ರಮಾಣದ, ಗಂಭೀರವಾದ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ನೀರಾವರಿ ಇಲಾಖೆಯ ಯೋಜನೆಯ ರೂ. 20,000 ಕೋಟಿ ಟೆಂಡರ್‌ನಲ್ಲಿ ಶೇ 10 ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆಡಳಿತ ಪಕ್ಷದ ಹಿರಿಯ ಶಾಸಕರೇ ಆರೋಪಿಸಿದ್ದಾರೆ.

ಅಲ್ಲದೇ ಇದರಲ್ಲಿ ಮುಖ್ಯಮಂತ್ರಿಗಳ ಕುಟುಂಬಸ್ಥರ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಇದರ ತನಿಖೆಗೆ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾಗಿರುವ ತಾವು ತನಿಖೆಗೆ ಆದೇಶಿಸಬೇಕು ಎಂದು ಕುಮಾರಸ್ವಾಮಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಅಬಕಾರಿ ಇಲಾಖೆಯ ಮಂತ್ರಿ ಪ್ರತಿ ಜಿಲ್ಲೆಯಿಂದಲೂ ಲಂಚದ ಹಣ ಆಪೇಕ್ಷಿಸುತ್ತಿರುವುದು, ಹಣ ಸಂಗ್ರಹ ಮಾಡದೇ ಹೋದರೆ ಅಧಿಕಾರಿಗಳು ಕೆಂಗಣ್ಣಿಗೆ ಗುರಿಯಾಗುವ ಅಪಾಯಗಳಿರುವುದರ ಬಗ್ಗೆ ಧ್ವನಿಮುದ್ರಿಕೆಯೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಸರ್ಕಾರ ತಾರತಮ್ಯ ಧೋರಣೆಯಿಂದ ನಡೆದುಕೊಳ್ಳುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಬಕಾರಿ ಇನ್ಸ್‌ಪೆಕ್ಟರ್‌ಗಳನ್ನು ಸರ್ಕಾರ ಅಮಾನತು ಮಾಡಿತು. ಆದರೆ ಮಂತ್ರಿ ಮತ್ತು ಉನ್ನತ ಅಧಿಕಾರಿಗಳನ್ನು ಸರ್ಕಾರ ರಕ್ಷಣೆ ಮಾಡಿಕೊಂಡಿದೆ. ಸರ್ಕಾರ ಒಂದೆಡೆ ಭ್ರಷ್ಟಾಚಾರ ಮಾಡುತ್ತದ್ದರೆ. ಸಜ್ಜನ ಪಕ್ಷಪಾತ ಮಾಡುತ್ತಿದೆ ಎಂದು ಪತ್ರದಲ್ಲಿ ದೂರಿದ್ದಾರೆ.

ಲಂಚದ ಆರೋಪದ ಮೇಲೆ ಈ ಇಲಾಖೆಯ ಹಿಂದಿನ ಮಂತ್ರಿಯಿಂದ ಸರ್ಕಾರ ರಾಜೀನಾಮೆ ಪಡೆದಿತ್ತು. ಆದರೆ ಈಗಿನ ಮಂತ್ರಿಯನ್ನು ರಕ್ಷಣೆ ಮಾಡಿಕೊಳ್ಳುತ್ತಿದೆ. ಇದರ ತನಿಖೆ ಅಗತ್ಯವಿದೆ. ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿರುವ ಈ ಬೆಳವಣಿಗೆಗಳ ಕುರಿತು ಸದನದಲ್ಲಿ ಚರ್ಚೆ ಮಾಡಬೇಕಾದ ಅಗತ್ಯವಿದೆ ಎಂಬುದನ್ನು ನೀವು ಮನಗಾಣಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ