ಬೆಂಗಳೂರು: ನಗರದ ಛಲವಾದಿಪಾಳ್ಯದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್, ಚಾಮರಾಜಪೇಟೆ ಶಾಸಕ ಜಮೀರ್ ಆಪ್ತ ಎಂದೇ ಗುರುತಿಸಿಕೊಂಡಿರುವ ಅತೂಶ್ ಎಂಬಾನತ್ತ ಬೆಟ್ಟು ಮಾಡಿ ಅರೋಪ ಮಾಡಿದ್ದಾರೆ.
ಕೊಲೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಎನ್.ಆರ್.ರಮೇಶ್ ಅವರು, ರೇಖಾ ಕಳೆದ ಎರಡು ವರ್ಷದ ಹಿಂದೆ ಪತಿ ಕಳೆದು ಕೊಂಡಿದ್ದರು. ಅದು ಆದಾ ನಂತರ ಸಹ ರೇಖಾ ಸಾರ್ವಜನಿಕವಾಗಿ ಬಹಳ ಕೆಲಸ ಮಾಡುತ್ತಿದ್ದರು. ನಿನ್ನೆ ಸಹ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಲಸಿಕೆ ಹಾಕಿಸೋ ಕೆಲಸ ಮಾಡುತ್ತಿದ್ದರು.
ಇನ್ನೂ ಐದಾರು ತಿಂಗಳಿನಲ್ಲಿ ಪಾಲಿಕೆ ಚುನಾವಣೆ ಬರಲಿದೆ. ಮತ್ತೆ ಚುನಾವಣೆಯಲ್ಲಿ ಅವರೇ ಗೆಲುವು ಪಡೆಯುತ್ತಾರೆ ಅನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಕೃತ್ಯಕ್ಕೆ ಜಮೀರ್ ಅವರು ಬೆಂಬಲ ಮಾಡಿರೋದು ಸತ್ಯ. ಏಕೆಂದರೆ ಕದಿರೇಶ್ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರೋ ವ್ಯಕ್ತಿಯ ಬಗ್ಗೆ ಸರಿಯಾಗಿ ತನಿಖೆ ನಡೆದಿದ್ದರೇ ಇಂದು ರೇಖಾ ಅವರ ಕೊಲೆ ನಡೆಯುತ್ತಿರಲಿಲ್ಲ.
ಅಂದು ಕದಿರೇಶ್ ಕೊಲೆ ಪ್ರಕರಣದಲ್ಲಿ ಯಾರೋ ಯಾರೋ ಬಂದು ಪೊಲೀಸರ ಎದುರು ಶರಣಾಗಿದ್ದರು. ಅವತ್ತು ಸಿದ್ದರಾಮಯ್ಯ ಸರ್ಕಾರ ಇತ್ತು. ಕೊಲೆ ಪ್ರಕರಣದಲ್ಲಿ ಅತೂಶ್ ಅನ್ನುವ ವ್ಯಕ್ತಿಯ ಬಗ್ಗೆ ತನಿಖೆ ನಡೆಸುವಂತೆ ನಾನೇ ಜಮೀರ್ ಎದುರೇ ಪೊಲೀಸರಿಗೆ ಹೇಳಿದ್ದೆ. ಆದರೆ ಜಮೀರ್ ಬೆಂಬಲದಿಂದ ಬಲಗೈ ಬಂಟ ಅತೂಶ್ ತನಿಖೆಯಿಂದ ತಪ್ಪಿಸಿಕೊಂಡಿದ್ದ. ಈ ಕೊಲೆಗೂ ಆತನೇ ಕಾರಣ… ತನಿಖೆ ಮಾಡಿದರೇ ಎಲ್ಲವೂ ಹೊರ ಬೀಳುತ್ತೆ ಎಂದು ಆರೋಪಿಸಿದರು.
ಚಾಮರಾಜ ಪೇಟೆಯಲ್ಲಿ ಶಾಸಕ ಜಮೀರ್ ಯಾವ ರೀತಿಯ ಆಡಳಿತ ಮಾಡುತ್ತಿದ್ದಾರೆ ಎಂಬುವುದಕ್ಕೆ ಈ ಕೊಲೆಗಳೇ ಸಾಕ್ಷಿಯಾಗಿದೆ. ಪಾಲಿಗೆ ಚುನಾವಣೆ ಮೇಲೆ ಕಣ್ಣೀಟ್ಟಿರುವ ವ್ಯಕ್ತಿಗಳಿಂದಲೇ ಈಗ ಕೊಲೆ ಆಗಿದೆ. ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರಿಗೆ ತಲಾ 10 ಸಾವಿರ ರೂಪಾಯಿ ನೀಡಿದ್ದರು. ಅಲ್ಲದೇ ಡಿಜೆ ಹಳ್ಳಿ ಪ್ರಕರಣದಲ್ಲೂ ಆರೋಪಿಗಳ ಮನೆಗೆ ಹೋಗಿ 2-3 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಆ ಮೂಲಕ ನೆಲದ ಕಾನೂನಿಗೆ ಗೌರವ ಕೊಡೋದಿಲ್ಲ ಎಂಬುವುದು ಸಾಬೀತು ಆಗಿದೆ ಎಂದು ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದರು.