ಬೆಂಗಳೂರು, ಜೂನ್.24: ರಾಜಧಾನಿಯಲ್ಲಿ ರೌಡಿಗಳ ಸದ್ದಡಗಿಸಲು ಪೊಲೀಸರ ಬುಲೆಟ್ ಗಳು ಸದ್ದು ಮಾಡುತ್ತಿವೆ. ಭೂಗತ ಪಾತಕಿ ರಶೀದ್ ಮಲ್ಬಾರಿಯ ಸಹಚರನ ಹತ್ಯೆ ಮಾಡಿದ್ದ ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಗೋವಿಂದಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಹಮದ್ ಸಲೀಂ ಗುಂಡೇಟು ತಿಂದ ಆರೊಪಿ. ಭೂಗತ ಪಾತಕಿ ರಶೀದ್ ಮಲ್ಬಾರಿ ಸಹಚರ ಕಲೀಂ ಆಲಿ ಮಹಿಳೆ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ತಿಳಿದ ಮಮಹದ್ ಸಲೀಂ ಕೆಲ ದಿನಗಳ ಹಿಂದೆ ಕಲೀಂ ಆಲಿಯನ್ನು ಹತ್ಯೆ ಮಾಡಿದ್ದ. ಕೊಲೆ ಪ್ರಕರಣ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಮಹಮದ್ ಸಲಿಂ ಇರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಗೋವಿಂದಪುರ ಪೊಲೀಸ್ ಠಾಣೆ ಸಬ್‌ಇನ್ಸ್ ಪೆಕ್ಟರ್ ಇಮ್ರಾನ್ ಮತ್ತು ಪೊಲೀಸ್ ಸಿಬ್ಬಂದಿ ಹಂಜಾ ತೆರಳಿದ್ದರು.
ಬಂಧನಕ್ಕೆ ತೆರಳಿದ ಪೊಲೀಸ್ ಪೇದೆ ಹಂಜಾ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಕೂಡಲೇ ಶರಣಾಗುವಂತೆ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಈ ವೇಳೆ ಪೊಲಿಸರ ಮೇಲೂ ಹಲ್ಲೆಗೆ ಯತ್ನಿಸಿದ್ದು, ಸರ್ವೀಸ್ ಪಿಸ್ತೂಲಿನಿಂದ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಗುಂಡು ಹಾರಿಸಿದ್ದಾರೆ. ಆರೋಪಿ ಎಡಗಾಲಿಗೆ ಪೆಟ್ಟಾಗಿದ್ದು, ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಗಾಯಾಳು ಪೇದೆ ಕೂಡ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಗೋವಿಂದಪುರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.