ಬೆಂಗಳೂರು: ಮೆಟ್ರೊ ರೈಲು ಮಾರ್ಗದ ಕಾಮಗಾರಿಗಾಗಿ ಮರಗಳನ್ನು ಸ್ಥಳಾಂತರಿಸಲು ಉದ್ದೇಶಿಸಿರುವ ನಿರ್ದಿಷ್ಟ ಸ್ಥಳದ ವಿವರ ಸಲ್ಲಿಸುವಂತೆ ಮರಗಳ ತಜ್ಞರ ಸಮಿತಿಗೆ (ಟಿಇಸಿ) ಹೈಕೋರ್ಟ್ ನಿರ್ದೇಶನ ನೀಡಿದೆ.
ಟಿಇಸಿ ಕಾರ್ಯನಿರ್ವಹಣೆ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಸೂಚನೆ ನೀಡಿತು.
‘ಮರಗಳು ಇರುವ ಜಾಗದಿಂದ ಸಮೀಪದ ಸ್ಥಳಗಳನ್ನು ಗುರುತಿಸಿ ಅಂದೇ ಸ್ಥಳಾಂತರ ಮಾಡಬೇಕಾಗುತ್ತದೆ. ನಿರ್ದಿಷ್ಟ ಜಾಗವನ್ನು ಟಿಇಸಿ ಅಂತಿಮಗೊಳಿಸಿದ ಬಳಿಕವೇ ಸ್ಥಳಾಂತರ ಮಾಡಬೇಕು’ ಎಂದು ಪೀಠ ತಿಳಿಸಿತು.
‘ಮರಗಳ ಸಂರಕ್ಷಣಾ ಕಾಯ್ದೆಯಡಿ ಇರುವ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳಾಂತರ ಮಾಡಬೇಕು. ಸ್ಥಳಾಂತರ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ನಿರ್ದೇಶನ ನೀಡಿತು.