ತುಮಕೂರು: ಭಯೋತ್ಪಾದನೆ, ಭ್ರಷ್ಟಾಚಾರ, ಅತ್ಯಾಚಾರ, ಲವ್ ಜಿಹಾದ್, ಗೋಹತ್ಯೆಯ ವಿರುದ್ಧ ನಾನು ಹೋರಾಟ ಮಾಡುತಿದ್ದೇನೆ. ಆದರೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪದೇಪದೆ ವಿಚಾರಣೆ ನೆಪದಲ್ಲಿ ನನಗೆ ಮಾನಸಿಕ ಕಿರುಕುಳ ನೀಡುತಿದ್ದು, ಅನೇಕ ಬಾರಿ ವಿಚಾರಣೆಗೆಂದು ಕರೆದು ಸುಳ್ಳು ಆರೋಪದಡಿ ಬಂಧಿಸಿದ್ದಾರೆ. ಹಿಂದೂ ಸಮಾಜ ನನ್ನ ಬೆಂಬಲಕ್ಕೆ ನಿಲ್ಲದಿರುವುದು ತುಂಬಾ ನೋವು ತಂದಿದೆ. ನನಗೆ ಪೊಲೀಸರ ಕಿರುಕುಳ ಸಹಿಸಲಾಗುತ್ತಿಲ್ಲ. ನನಗೆ ದಯಾಮರಣ ನೀಡಿ ಎಂದು ರಾಜ್ಯಪಾಲರಿಗೆ ಮಧುಗಿರಿಮೋದಿ ಮನವಿ ಪತ್ರ ಸಲ್ಲಿಸಿದ್ದಾರೆ.
ರಾಜ್ಯ ಹಿಂದು ಸಾಮ್ರಾಟ್ ಧರ್ಮಸೇನೆಯ ಸಂಸ್ಥಾಪಕ ಅಧ್ಯಕ್ಷ ಅತುಲ್ ಕುಮಾರ್ ಸಭರ್ವಾಲ್ @ ಮಧುಗಿರಿಮೋದಿ ಪೊಲೀಸ್ ಕಿರುಕುಳದಿಂದ ನೊಂದು ದಯಾಮರಣ ಕೋರಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಪೊಲೀಸರ ಕಿರುಕುಳ ಸಹಿಸಲಾಗದೆ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಯವರ ಮೂಲಕ ಸೋಮವಾರ ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವದಾಗಿ ಮಧುಗಿರಿ ಮೋದಿ ತಿಳಿಸಿದ್ದಾರೆ.
ಭಯೋತ್ಪಾದಕರಿಗೆ, ಅತ್ಯಾಚಾರಿಗಳಿಗೆ, ಭ್ರಷ್ಟರಿಗೆ, ಸಮಾಜಘಾತುಕರಿಗೆ ಇಲ್ಲದ ಪೊಲೀಸ್ ಕಿರುಕುಳ ನನ್ನ ಮೇಲೇಕೆ? ಇದನ್ನು ನಾನೇ ಪ್ರಶ್ನಿಸಬೇಕು! ನನ್ನವರೆಂದವರು ಯಾರೂ ಪ್ರಶ್ನಿಸಲಾರರು ಎಂಬುದು ಮಧುಗಿರಿಮೋದಿ ಅಳಲು.