ಬೆಳಗಾವಿ : ಸಿಡಿ ಪ್ರಕರಣದ ನಂತ್ರ, ರಾಜಕೀಯದಿಂದ ಕೊಂಚ ದೂರವೇ ಉಳಿದಿರುವಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಈಗ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಶತಾಯಗತಾಯ ಮತ್ತೆ ಸಚಿವರಾಗಬೇಕು ಎನ್ನುವಂತ ಕಸರತ್ತಿನಲ್ಲಿಯೂ ತೊಡಗಿರುವಂತ ಅವರು, ಮಂತ್ರಿ ಸ್ಥಾನ ಸಿಗದೇ ಇದ್ದರೇ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸರ್ಕಾರದ ವಿರುದ್ಧವೇ ಸೆಡ್ಡು ಹೊಡೆಯಲಿದ್ದಾರೆ ಎನ್ನಲಾಗುತ್ತಿದೆ.
ಸಿಡಿ ಪ್ರಕರಣದ ನಂತ್ರ, ಬೆಂಗಳೂರಿನಿಂದಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರ ಉಳಿದು, ಗೋಕಾಕ್ ತಮ್ಮ ಕ್ಷೇತ್ರದಲ್ಲಿ ಬೀಡು ಬಿಡ್ಡು, ಕೊರೋನಾ ನಿಯಂತ್ರಣ, ಜನರಿಗೆ ನೆರವಾಗುವಂತ ಕೆಲಸದಲ್ಲಿ ತೊಡಗಿದ್ದಾರೆ. ಇದಲ್ಲದೇ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡದೇ ದೂರವೇ ಉಳಿದಿರುವಂತ ಅವರ ಬಗ್ಗೆ, ಈಗ ಸ್ಪೋಟಕ ಸುದ್ದಿಯೊಂದು ಹೊರ ಬಿದ್ದಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೇ ನೀಡಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೂ ಮೊದಲು ಮಹಾರಾಷ್ಟ್ರಕ್ಕೆ ತೆರಳಿರುವಂತ ಅವರು, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಬಳಿಕ ಜೂನ್.23ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.