ಮಂಗಳೂರು, ಜೂನ್ 20; ಲಾಕ್‌ಡೌನ್ ನಡುವೆಯೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದ ದೇವಾಲಯಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ .ಕೆ.ವಿ ನೊಟೀಸ್ ಕೊಟ್ಟಿದ್ದರು. ಈಗ ತೆರೆದಿದ್ದ ದೇವಾಲಯಗಳು ಪುನಃ ಬಾಗಿಲು ಮುಚ್ಚಿವೆ.
ಈಗ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳಿಗೆ ಬರುವ ಭಕ್ತರ ವಾಹನವನ್ನು ಸೀಝ್ ಮಾಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ತೀವ್ರಗೊಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಭಕ್ತರ ತಡೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ರಾಜ್ಯದ ಬೇರೆ-ಬೇರೆ ಜಿಲ್ಲೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೇ ಆಗಮಿಸಿದ ಭಕ್ತರ ಹಲವು ವಾಹನಗಳನ್ನು ಪೊಲೀಸರು ವಾಪಾಸು ಕಳುಹಿಸಿದ್ದಾರೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಗುಂಡ್ಯ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಶನಿವಾರ ತಡರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರ ಸುಮಾರು 100ಕ್ಕೂ ಹೆಚ್ಚು ವಾಹನಗಳನ್ನು ವಾಪಾಸ್ ಕಳುಹಿಸಿದ್ದಾರೆ.
ಸರ್ಕಾರದ ಮುಂದಿನ ಆದೇಶದ ತನಕ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿಬಾರದೆಂದು ಪೊಲೀಸರು ಸೂಚನೆ ನೀಡಿದ್ದಾರೆ. ಮತ್ತೆ ಬಂದರೆ ವಾಹನಗಳನ್ನು ಸೀಝ್ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ದಕ್ಷಿಣ ಕನ್ನಡ ಮತ್ತು ಹಾಸನ ಗಡಿಭಾಗವಾದ ಗುಂಡ್ಯ, ಸುಬ್ರಹ್ಮಣ್ಯ, ಚಿಕ್ಕಮಗಳೂರು ಗಡಿಭಾಗವಾದ ಚಾರ್ಮಾಡಿ, ಉಜಿರೆ ಮತ್ತು ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ಬಿಸಿಲೆಘಾಟ್, ಪೆರಿಯಶಾಂತಿ ಮತ್ತು ಕುಲ್ಕುಂದ ಮತ್ತು ಧರ್ಮಸ್ಥಳದ ಸ್ನಾನಘಟ್ಟದ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ತಪಾಸಣೆ ಮಾಡುತ್ತಿದ್ದಾರೆ.