ಬೆಂಗಳೂರು,ಜೂ.19-ಮೇಲ್ನೋಟಕ್ಕೆ ಪರಿಸ್ಥಿತಿ ಕೊಂಚ ಸುಧಾರಿಸಿದೆ ಎಂದು ಹೇಳಲಾಗುತ್ತಿದ್ದರೂ ನಾಯಕತ್ವ ಕುರಿತಂತೆ ಎದ್ದಿರುವ ವಿವಾದಕ್ಕೆ ಅಂತಿಮ ಹಾಡಲು ಕೇಂದ್ರ ವರಿಷ್ಠರು ಮುಂದಿನ ವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಲಿದ್ದಾರೆ.
ಈ ವಾರದ ನಂತರ ಪರಿಸ್ಥಿತಿ ನೋಡಿಕೊಂಡು ದೆಹಲಿಗೆ ಬರುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ದೆಹಲಿಗೆ ಆಗಮಿಸುವಂತೆ ಸಿಎಂಗೆ ಸೂಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಮೂರು ದಿನಗಳ ಪ್ರವಾಸಕ್ಕೆ ಬಂದಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು, ಸಚಿವರ ಮತ್ತು ಶಾಸಕರನ್ನು ಭೇಟಿಯಾಗಿ ಅಭಿಪ್ರಾಯವನ್ನು ಸಂಗ್ರಹಿಸಿದ್ದರು.
ಮುಖ್ಯವಾಗಿ ಮೂರು ವಿಷಯಗಳ ಬಗ್ಗೆ ಅರುಣ್ ಸಿಂಗ್ ವಿಶೇಷ ಗಮನಹರಿಸಿದ್ದು, ಆ ಪೈಕಿ ಮೊದಲನೆಯದು ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಮಾಡುವ ಅಗತ್ಯ ಇದೆಯೋ ಇಲ್ಲವೋ? ಎಂಬುದು. ಈ ಹಿನ್ನಲೆಯಲ್ಲಿ ನಾಯಕತ್ವ ಬದಲಿಸಿದರೆ ಮುಂದೆ ಅದು ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು? ಎಂಬುದಾಗಿ ಕೂಡ ಅಭಿಪ್ರಾಯ ಕ್ರೋಢೀಕರಿಸಿಕೊಂಡಿದ್ದಾರೆ.
ಎರಡನೇ ವಿಷಯ ಒಂದೊಮ್ಮೆ ಯಡಿಯೂರಪ್ಪ ನಾಯಕತ್ವ ಬದಲಿಸುವುದಾದರೆ ಯಾರಿಗೆ ನಾಯಕತ್ವ ನೀಡಬಹುದು? ಯಾರಿಗೆ ಪರ್ಯಾಯ ನಾಯಕತ್ವ ನಿರ್ವಹಿಸುವ ಶಕ್ತಿ ಸಾಮಥ್ರ್ಯಗಳಿವೆ ಎಂಬ ಬಗ್ಗೆ ಕೂಡ ಅರುಣ್ ಸಿಂಗ್ ಮಾಹಿತಿ ಕಲೆ ಹಾಕಿದ್ದಾರೆ.
ಕಡೆಯದಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಮುಂದುವರೆಯಲಿ ಬಿಡಲಿ ಬಿಜೆಪಿಯನ್ನು 2023ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ಹಾಗೂ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸಬೇಕಿದೆ. ಈ ದೃಷ್ಟಿಯಿಂದ ಏನು ಮಾಡಬೇಕು? ಎಂಬ ಬಗ್ಗೆಯೂ ರಾಷ್ಟ್ರೀಯ ಜೆ.ಪಿ.ನಡ್ಡ ಅವರಿಗೆ ಇಂದು ಸಮಗ್ರ ವರದಿ ಸಲ್ಲಿಕೆ ಮಾಡುವರು.
ಬಳಿಕ ಜೆ.ಪಿ. ನಡ್ಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಚರ್ಚೆ ಮಾಡಿ ರಾಜ್ಯ ಬಿಜೆಪಿ ಬಗ್ಗೆ ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಈ ಹಿನ್ನಲೆಯಲ್ಲಿ ಇಂದು ಅರುಣ್ ಸಿಂಗ್ ಅವರು ನೀಡುವ ವರದಿಯು ಮುಖ್ಯಮಂತ್ರಿ ಯಡಿಯೂರಪ್ಪನವರ ಅಕಾರಾವ ಮುಗಿಯುತ್ತದೆಯೋ.. ಮುಂದುವರೆಯುತ್ತದೆಯೋ ಎಂಬುದನ್ನು ಕಾದುನೋಡಬೇಕು.
Laxmi News 24×7