ಬೆಂಗಳೂರು: ಸರ್ಕಾರದ ವಿರುದ್ಧ ಮತ್ತೆ ಗುಡುಗಿರುವ ಎಂ ಎಲ್ ಸಿ ಹೆಚ್.ವಿಶ್ವನಾಥ್ ನಿರಾವರಿ ಯೋಜನೆಗಳಲ್ಲಿ ಭಾರಿ ಅಕ್ರಮ ನಡೆದಿದ್ದು, ಕಿಕ್ ಬ್ಯಾಕ್ ಪಡೆದುಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ ವಿಶ್ವನಾಥ್, ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ ಬಿ.ವೈ.ವಿಜಯೇಂದ್ರ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಭದ್ರಾ ಮೇಲ್ದಂಡೆ ನಿರಾವರಿ ಯೋಜನೆ ಕಾಮಗಾರಿಗಾಗಿ 20 ಸಾವಿರ ಕೋಟಿ ರೂ.ಟೆಂಡರ್ ತರಾತುರಿಯಲ್ಲಿ ಕರೆಯಲಾಗಿದೆ. ಇದರ ಅಗತ್ಯವೇನಿತ್ತು? ಕಾವೇರಿ ನೀರಾವರಿ ನಿಗಮದಲ್ಲೂ ಅಕ್ರಮ ನಡೆದಿದೆ. ಗುತ್ತಿಗೆದಾರರಿಂದಲೇ ಹಣಪಡೆಯಲಾಗುತ್ತಿದೆ. ಇದು ಕಾಂಟ್ರ್ಯಾಕ್ಟರ್ ಒರಿಯೆಂಟೆಡ್ ಸರ್ಕಾರ. ಇದೆಲ್ಲದರಲ್ಲೂ ವಿಜಯೇಂದ್ರ ಹಸ್ತಕ್ಷೇಪ ನಡೆದಿರುವುದು ಕೇವಲ ನನ್ನೊಬ್ಬನ ಆರೋಪವಲ್ಲ ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಕುಟುಂಬ ರಾಜಕಾರಣ, ಮಕ್ಕಳಿಂದಾಗಿಯೇ ಜೈಲಿಗೆ ಹೋಗಿ ಬಂದಿದ್ದಾರೆ. ಈಗ ಮತ್ತೊಮ್ಮೆ ಅವರು ಜೈಲಿಗೆ ಹೋಗುವ ಸ್ಥಿತಿ ಬರಬಾರದು ಎಂಬುದನ್ನು ಎಚ್ಚರಿಸುತ್ತಿದ್ದೇನೆ. ವಿಜಯೇಂದ್ರ ವಿರುದ್ಧ ಇಡಿ ಪ್ರಕರಣ ದಾಖಲಾಗಿದೆ. ಹೀಗಾಗಿಯೇ ವಿಚಾರಣೆ ಎದುರಿಸಲು ಅವರು ಪದೇ ಪದೇ ದೆಹಲಿಗೆ ಹೋಗುತ್ತಿದ್ದಾರೆ. ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ, ಕುಟುಂಬ ರಾಜಕಾರಣ ಮಿತಿ ಮೀರಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.