ಬೆಂಗಳೂರು – ಬಿಜೆಪಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲು 28 ಬಿಜೆಪಿ ಶಾಸಕರು ಅವಕಾಶ ಕೇಳಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಶಾಸಕರ ಜೊತೆಗೆ ಅರುಣ ಸಿಂಗ್ ವಯಕ್ತಿಕವಾಗಿ ಮಾತನಾಡಲಿದ್ದಾರೆ. ಬೆಳಗಾವಿಯ ಇಬ್ಬರು ಶಾಸಕರು ಸೇರಿದಂತೆ ಸುಮಾರು 28 ಶಾಸಕರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತನಾಡಲು ಅವಕಾಶ ಕೇಳಿದ್ದಾರೆ.
ಹರತಾಳು ಹಾಲಪ್ಪ, ಸಿದ್ದು ಸವದಿ, ರಾಜೇಶ ಗೌಡ, ಅಭಯ ಪಾಟೀಲ, ಕುಮಾರ ಬಂಗಾರಪ್ಪ, ಸಿ.ಪಿ.ಯೋಗೀಶ್ವರ, ರೂಪಾಲಿ ನಾಯಕ, ಸುನೀಲ ಕುಮಾರ, ಪರಪ್ಪ ಮುನವಳ್ಳಿ, ಅಪ್ಪಚ್ಚು ರಂಜನ್, ಉದಯ ಗರುಡಾಚಾರ, ಜ್ಯೋತಿ ಗಣೇಶ, ಪ್ರೀತಂ ಗೌಡ, ಅರವಿಂದ ಬೆಲ್ಲದ್, ಮಹೇಶ ಕುಮಠಳ್ಳಿ, ಸೋಮಶೇಖರ ರೆಡ್ಡಿ, ಸಿದ್ದು ಸವದಿ, ಮಹಾದೇವಪ್ಪ ಯಾದವಾಡ ಸೇರಿದಂತೆ 28 ಜನರು ಅವಕಾಶ ಕೇಳಿದ್ದಾರೆ.
ಸಚಿವ ಉಮೇಶ ಕತ್ತಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ್ ಮತ್ತು ಅನಿಲ ಬೆನಕೆ ಹೆಸರು ಕೂಡ ಕೇಳಿ ಬಂದಿದ್ದು ಖಚಿತವಾಗಿಲ್ಲ.
ಆದರೆ ಇದರಲ್ಲಿ ಎಷ್ಟು ಜನರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿದ್ದಾರೆ? ಎಷ್ಟು ಜನರು ಯಡಿಯೂರಪ್ಪ ವಿರುದ್ಧವಾಗಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಯಡಿಯೂರಪ್ಪ ಪರವಾಗಿರುವವರು ಸೀಕ್ರೆಟ್ ಭೇಟಿ ಮಾಡುವ ಸಾಧ್ಯತೆ ಕಡಿಮೆ.
ಅರುಣ ಸಿಂಗ್ ಶಾಸಕರೊಂದಿಗೆ ಚರ್ಚಿಸುವ ಹೊತ್ತಿನಲ್ಲಿ ಮುಖ್ಯಮಂತ್ರಿಗಳಾಗಲಿ, ಬಿಜೆಪಿ ರಾಜ್ಯಾಧ್ಯಕ್ಷರಾಗಲಿ ಇರುವುದಿಲ್ಲ.