ಧ್ರುವ ಸರ್ಜಾ ನಟನೆಯ ‘ದುಬಾರಿ’ ಸಿನಿಮಾದಿಂದ ನಿರ್ದೇಶಕ ನಂದ ಕಿಶೋರ್ ಅವರನ್ನು ಹೊರಗಿಡಲಾಗಿದೆ ಎಂಬ ಬಗ್ಗೆ ಸಿನಿಮಾದ ನಿರ್ಮಾಪಕ ಉದಯ್ ಕೆ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.
‘ನಂದ ಕಿಶೋರ್ ಅವರನ್ನು ಹೊರಗಿಡಲಾಗಿಲ್ಲ. ಬದಲಿಗೆ ‘ದುಬಾರಿ’ ಸಿನಿಮಾದ ಚಿತ್ರೀಕರಣವನ್ನು ತುಸು ತಡವಾಗಿ ಮಾಡಲಾಗುತ್ತದೆ. ಸಿನಿಮಾವನ್ನು ತುಸು ಹೋಲ್ಡ್ ಮಾಡಿದ್ದೇವೆ ಅಷ್ಟೆ’ ಎಂದಿದ್ದಾರೆ ಉದಯ್ ಕೆ ಮೆಹ್ತಾ.
ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, ‘ದುಬಾರಿ’ ಸಿನಿಮಾದ ಅರ್ಧದಷ್ಟು ಚಿತ್ರೀಕರಣ ವಿದೇಶದಲ್ಲಿಯೇ ನಡೆಯಬೇಕಿದೆ. ಹಾಗಾಗಿ ಕೊರೊನಾ ಪೂರ್ಣವಾಗಿ ಮರೆಯಾಗುವವರೆಗೂ ಅದು ಸಾಧ್ಯವಿಲ್ಲ. ಹಾಗಾಗಿ ಇನ್ನೂ ಕೆಲ ತಿಂಗಳು ಹೋದ ಬಳಿಕವಷ್ಟೆ ಆ ಸಿನಿಮಾ ಪ್ರಾರಂಭ ಮಾಡಲಿದ್ದೇವೆ ಎಂದಿದ್ದಾರೆ. ‘ದುಬಾರಿ’ ಸಿನಿಮಾವನ್ನು ನಂದ ಕಿಶೋರ್ ಅವರೇ ನಿರ್ದೇಶನ ಮಾಡಲಿದ್ದಾರೆ ಎಂದಿದ್ದಾರೆ.
‘ದುಬಾರಿ’ಗೆ ಮುನ್ನಾ ಧ್ರುವ ಸರ್ಜಾ ಜೊತೆಗೆ ಮತ್ತೊಂದು ಸಿನಿಮಾ ಮಾಡಲಿದ್ದು, ಅದಕ್ಕೆ ಕತೆ ಈಗಾಗಲೇ ರೆಡಿಯಾಗಿದೆ. ಚಿತ್ರಕತೆ ಕಾರ್ಯ ಚಾಲ್ತಿಯಲ್ಲಿದ್ದು, ನಾಯಕಿ ಹಾಗೂ ಇತರ ಪಾತ್ರಗಳಿಗಾಗಿ ಅನ್ವೇಷಣೆ ನಡೆಯುತ್ತಿದೆ ಎಂದಿದ್ದಾರೆ. ಸಿನಿಮಾಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಉದಯ್ ಕೆ ಮೆಹ್ತಾ.
ಧ್ರುವ ಸರ್ಜಾಗಾಗಿ ‘ಪೊಗರು’ ಸಿನಿಮಾ ನಿರ್ದೇಶಿಸಿದ್ದ ನಂದ ಕಿಶೋರ್, ನಂತರ ‘ದುಬಾರಿ’ ಸಿನಿಮಾ ಘೋಷಿಸಿದ್ದರು. ಸಿನಿಮಾದ ಮುಹೂರ್ತ ಸಹ ನೆರವೇರಿತ್ತು. ನಾಯಕಿಯಾಗಿ ಶ್ರೀಲೀಲಾ ಆಯ್ಕೆ ಆಗಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ಚಿತ್ರೀಕರಣ ಪ್ರಾರಂಭವಾಗಲಿಲ್ಲ.
Laxmi News 24×7