ಧಾರವಾಡ, ಮೇ 27; ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ತಮ್ಮ ಸ್ನೇಹಿತರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಮುನ್ನಡೆಸುತ್ತಿರುವ ‘ಮೆಡಿಕಲ್ ಆಕ್ಸಿಜನ್ ಫಾರ್ ಆಲ್’ ತಂಡದಿಂದ ಪಡೆದ ಆಕ್ಸಿಜನ್ ಕಾನ್ಸನ್‍ಟ್ರೇಟರ್‌ಗಳನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಿದರು.
ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿವಿಧ ಕಡೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ, ಅಲ್ಲಿ ದಾಖಲಿರುವ ಸೋಂಕಿತರಿಗೆ ಉಸಿರಾಟ ತೊಂದರೆ ಉಂಟಾದರೆ ತಕ್ಷಣ ಅವರ ಸಹಾಯಕ್ಕೆ ನೆರವಾಗಲು ಆಕ್ಸಿಜನ್ ಕಾನ್ಸನ್‍ಟ್ರೇಟರ್ ನೀಡಲಾಗಿದೆ. ಪೋಲಿಸ್ ಇಲಾಖೆ 2 ಕಾನ್ಸನ್‍ಟ್ರೇಟರ್‌ಗಳನ್ನು ಈಗಾಗಲೇ ನವಲಗುಂದ ತಾಲೂಕು ಆಸ್ಪತ್ರೆಗೆ ನೀಡಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಪಿ. ಕೃಷ್ಣಕಾಂತ, “ನನ್ನ ಸ್ನೇಹಿತರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಮೆಡಿಕಲ್ ಆಕ್ಸಿಜನ್ ಫಾರ್ ಆಲ್ ಎಂಬ ತಂಡ ಮಾಡಿದ್ದಾರೆ. ನಾನು ಸೇರಿದಂತೆ ಸ್ನೇಹಿತರೆಲ್ಲ ಸೇರಿ ಅಗತ್ಯವಿರುವವರಿಗೆ ಆಕ್ಸಿಜನ್ ಸಿಗಲು ತಂಡ ಕಟ್ಟಿದ್ದೇವೆ. ನಮ್ಮ ತಂಡದಿಂದ 8 ಲೀಟರ್‌ನ ಒಟ್ಟು 22 ಆಕ್ಸಿಜನ್ ಕಾನ್ಸನ್‍ಟ್ರೇಟರ್‌ಗಳನ್ನು ಧಾರವಾಡ ಜಿಲ್ಲೆಗೆ ತರಿಸಿದ್ದೇನೆ. ತಾಲೂಕಾ ಆಸ್ಪತ್ರೆ, ಪೊಲೀಸ್ ಕೋವಿಡ್ ಕೇರ್ ಸೆಂಟರ್ ಮತ್ತು ವಿಶೇಷವಾಗಿ ಗ್ರಾಮೀಣ ಭಾಗದ ಕೊವೀಡ್ ಕೇರ್ ಸೆಂಟರ್‌ಗಳಿಗೆ ಇವುಗಳನ್ನು ನೀಡಲಾಗುತ್ತದೆ” ಎಂದರು.
“ಸಾರ್ವಜನಿಕರು ಲಾಕ್‍ಡೌನ್ ನಿಯಮಗಳನ್ನು ಪಾಲಿಸಿ, ಸಹಕಾರ ನೀಡಬೇಕು. ಅನವಶ್ಯಕವಾಗಿ ಹೊರಗೆ ಬರದೇ ತಮ್ಮ ಮನೆಗಳಲ್ಲಿ ಇದ್ದು ಸೋಂಕು ಹರಡದಂತೆ ಮುನ್ನೆಚ್ಚರಿಗೆ ವಹಿಸಬೇಕು. ಗ್ರಾಮೀಣ ಭಾಗದಲ್ಲಿರುವ ಕೋವಿಡ್ ಸೋಂಕಿತರು ಮನೆಗಳಲ್ಲಿ ಐಸೋಲೇಶನ್ ಆಗದೇ, ಜಿಲ್ಲಾಡಳಿತ ಸ್ಥಾಪಿಸಿರುವ ಗ್ರಾಮ ಅಥವಾ ತಾಲೂಕಾ ಮಟ್ಟದ ಕೋವಿಡ್ ಕಾಳಜಿ ಕೇಂದ್ರಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು” ಎಂದು ಕರೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ ಮಾತನಾಡಿ, “ವಿಶೇಷ ಆಸಕ್ತಿ ಹಾಗೂ ಸಾಮಾಜಿಕ ಕಳಕಳಿಯಿಂದ 22 ಆಕ್ಸಿಜನ್ ಕಾನ್ಸನ್‍ಟ್ರೇಟರ್‌ಗಳನ್ನು ತಮ್ಮ ವಯಕ್ತಿಕ ಸಹಾಯದಿಂದ ನಮ್ಮ ಜಿಲ್ಲೆಗೆ ನೀಡಿರುವ ಎಸ್.ಪಿ. ಕೃಷ್ಣಕಾಂತ ಅವರಿಗೆ ಧನ್ಯವಾದಗಳು. ಜಿಲ್ಲಾಡಳಿತದಿಂದ ಎಲ್ಲ ತಾಲೂಕುಗಳಲ್ಲಿ ಮತ್ತು ಅಗತ್ಯವಿರುವ ಹೋಬಳಿ ಅಥವಾ ಗ್ರಾಮಗಳಲ್ಲಿ ಕೋವಿಡ್ ಕೆರ್ ಸೆಂಟರ್ ಆರಂಭಿಸಲಾಗಿದೆ. ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಅಗತ್ಯವಿರುವ ಆಸ್ಪತ್ರೆಗಳಿಗೆ ಇವುಗಳನ್ನು ವಿತರಿಸಲಾಗುವುದು” ಎಂದರು.